ಚಿಕ್ಕಮಗಳೂರು: ಕುಡಿದ ಅಮಲಿನಲ್ಲಿ ಚಾಲಕ ಬೇಕಾಬಿಟ್ಟಿ ಕಾರು ಚಾಲನೆ ಮಾಡಿ, ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ್ದು, ನಾಲ್ಕು ಕಾರುಗಳು ಜಖಂ ಆಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೃಷ್ಣಾಪುರ ಗ್ರಾಮದ ಬಳಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ನೋಂದಣಿ ಹೊಂದಿರುವ ವೋಕ್ಸ್‍ವ್ಯಾಗನ್ ಪೋಲೋ ಕಾರು ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದು ಕಾರುಗಳನ್ನ ಜಖಂಗೊಳಿಸಿದೆ. ಅಷ್ಟೇ ಅಲ್ಲದೆ ವೇಗವಾಗಿದ್ದ ಕಾರು ಅಪಘಾತಕ್ಕೀಡಾಗುತ್ತಿದ್ದಂತೆ ಕಾರಿನ ಮುಂಭಾಗದ ಟೈರ್‍ಗಳೂ ಕಳಚಿ ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಾರಿನಲ್ಲಿದ್ದ ಚಾಲಕ ಸಂಪೂರ್ಣ ಪಾನಮತ್ತನಾಗಿದ್ದರಿಂದ ಈ ರೀತಿ ಅವಘಡ ಸಂಭವಿಸಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಅಲ್ಲದೆ ಅಷ್ಟು ವೇಗವಾಗಿದ್ದ ಕಾರು ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದರೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪ್ರವಾಸಕ್ಕೆಂದು ಬಂದಿದ್ದ ಯುವಕರು ಮೂಡಿಗೆರೆಯ ಗಾಳಿ, ಮಳೆ, ಚಳಿಗೆ ತುಸು ಹೆಚ್ಚೇ ಮದ್ಯ ಸೇವಿಸಿದ್ದರಿಂದ ಈ ರೀತಿ ದುರ್ಘಟನೆ ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.