ಎಚ್‍ಡಿಡಿ ಸ್ಪರ್ಧೆ ಬಗ್ಗೆ ನಮ್ಮೊಂದಿಗೆ ಯಾರೂ ಚರ್ಚಿಸಿಲ್ಲ- ಡಿಕೆಶಿ

Public TV
2 Min Read

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸ್ಪರ್ಧೆ ಬಗ್ಗೆ ಇದುವರೆಗೆ ನಮ್ಮ ಜೊತೆ ಯಾರೂ ಚರ್ಚೆ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಮ್ಮ ಹೈಕಮಾಂಡ್ ಸೋನಿಯಾ ಗಾಂಧಿ ಅವರು ಎಚ್.ಡಿ.ದೇವೇಗೌಡ ಅವರಿಗೆ ಬೆಂಬಲ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ಹೈ ಕಮಾಂಡ್, ಪಾರ್ಟಿ ಏನು ತೀರ್ಮಾನ ಮಾಡುತ್ತೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಜೂನ್ 8ರಂದು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವಾಗ ಪಕ್ಷದ ಯಾವ ಕಾರ್ಯಕರ್ತರು ಬರಬಾರದು. ಶಾಸಕರು ಕೆಲವು ಮುಖಂಡರುಗಳಷ್ಟೇ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ ಡಿ.ಕೆ.ಶಿವಕುಮಾರ್, ಯಾರೋ ಮೆಂಟಲ್‍ಗಳು ಎಲ್ಲಾ ಇದ್ದಾರೆ. ಏನೇನೋ ಮಾತಾಡ್ತಾರೆ. ಕಾಂಗ್ರೆಸ್‍ನಿಂದ 20 ಜನ, 30 ಜನ, 40 ಜನರನ್ನು ಬಿಜೆಪಿಗೆ ಕರೆದುಕೊಂಡು ಹೋಗುತ್ತೇನೆ ಅಂತಾರೆ. ಅದೇನು ಕಡ್ಲೆಪುರಿ ವ್ಯಾಪಾರ ಅಲ್ಲ. ಶಾಸಕರುಗಳಿಗೆ ಅಗೌರವ ತರೋದು ಬೇಡ ಎಂದು ವಾಗ್ದಾಳಿ ನಡೆಸಿದರು.

ಯಾವ್ಯಾವ ಸಚಿವರು ಏನೇನು ಮಾತಾಡಿದಾರೆ ಗಮನಿಸುತ್ತಿರುವೆ. ಯಾರು ಯಾರೆಲ್ಲಾ ಎಲ್ಲಿ ಏನು ಸಭೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತು. ನಿನ್ನೆ ರಾತ್ರಿ ಯಾರು ಯಾವ ಹೋಟೆಲ್‍ನಲ್ಲಿ ಸೇರಿಕೊಂಡಿದ್ದರು ಅಂತ ತಿಳಿದಿದೆ. ಯಾರು ಯಾರನ್ನ ಕಾಯ್ತಾ ಕೂತಿದ್ದರು ಅನ್ನೋದು ಗೊತ್ತಿದೆ ಎಂದು ಗುಡುಗಿದರು.

ಲೆಕ್ಕಾಚಾರ:
ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಬಲ 68. ಒಬ್ಬರು ಅಭ್ಯರ್ಥಿ ಆಯ್ಕೆಯಾಗುವುದಕ್ಕೆ 45 ಮತಗಳು ಸಾಕು. ಆದ್ದರಿಂದ ಮಲ್ಲಿಕಾರ್ಜುನ ಖರ್ಗೆ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ. ಕರ್ನಾಟಕದ ಹಿರಿಯ ನಾಯಕರಿಗೆ ಪಕ್ಷ ರಾಜ್ಯಸಭಾ ಸದಸ್ಯರಾಗುವ ಅವಕಾಶವನ್ನು ನೀಡಿದೆ.

ಇತ್ತ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಬೇಕಾದರೆ ಕಾಂಗ್ರೆಸ್ ಹೆಚ್ಚುವರಿ ಮತಗಳ ಅಗತ್ಯವಿದೆ. ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಲು 45 ಮತಗಳ ಅಗತ್ಯವಿದೆ. ಕಾಂಗ್ರೆಸ್ ಬಳಿ 23 ಹೆಚ್ಚುವರಿ ಮತಗಳಿದ್ದು, ಜೆಡಿಎಸ್ ಬಳಿ 34 ಮತಗಳಿವೆ. ಈ ಎರಡೂ ಪಕ್ಷಗಳ ಒಟ್ಟು 54 ಮತಗಳನ್ನು ಜೆಡಿಎಸ್‍ಗೆ ನೀಡಿದರೆ ದೇವೇಗೌಡ ಅವರು ಗೆಲ್ಲಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *