ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಮತ್ತೆ ಜೆಡಿಎಸ್‌ಗೆ ಬರುತ್ತಾರೆ ಎಂಬ ಸುದ್ದಿ ಕಳೆದ ವಾರದಿಂದ ರಾಜ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಈ ಸುದ್ದಿಗೆ ಪೂರಕ ಎಂಬಂತೆ ಇಂದು ಮಾಜಿ ಪ್ರಧಾನಿ ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ಇಬ್ರಾಹಿಂ ಆಗಮಿಸಿ ಮಾತುಕತೆ ನಡೆಸಿದರು.
ಪಕ್ಷ ಸೇರ್ಪಡೆ ಕುರಿತು ಜೆಡಿಎಸ್ ವರಿಷ್ಠ ದೇವೇಗೌಡ ಜೊತೆ ಇಬ್ರಾಹಿಂ ಮಾತುಕತೆ ನಡೆಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಮಾತುಕತೆ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಉಪಸ್ಥಿತಿ ಇದ್ದರು.
ಕಳೆದ ವಾರ ಎಚ್‌ಡಿಕೆ ಸಿಎಂ ಇಬ್ರಾಹಿಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಮಾತುಕತೆ ನಡೆದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶನಿವಾರ ರಾತ್ರಿ ಬೆಂಗಳೂರಿನ ಬೆನ್ಸನ್ ಟೌನ್ ನಿವಾಸದಲ್ಲಿ ಸಿಎಂ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಸಿ.ಎಂ ಇಬ್ರಾಹಿಂ ಇತ್ತೀಚೆಗೆ ಸಿದ್ದರಾಮಯ್ಯ ಕುರಿತಾಗಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತದೆ.
ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗೊಂಡು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದ್ದರೂ ಇಬ್ರಾಹಿಂ ಅಧಿಕೃತವಾಗಿ ಯಾವುದೇ ವಿಚಾರವನ್ನು ತಿಳಿಸಿಲ್ಲ. ಆದರೆ ಅವರ ಇತ್ತೀಚಿನ ನಡೆ ಗಮನಿಸುವಾಗ ಪರೋಕ್ಷವಾಗಿ ಪಕ್ಷ ತೊರೆಯುವ ಸುಳಿವನ್ನು ನೀಡುತ್ತಿದ್ದಾರೆ.
ಈ ಹಿಂದೆ ಜೆಡಿಎಸ್‌ನಲ್ಲಿದ್ದ ಸಿಎಂ ಇಬ್ರಾಹಿಂ 2008ರಲ್ಲಿ ದಳ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಕೇಂದ್ರ ಸಚಿವರೂ ಆಗಿದ್ದ ಅವರು ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ.