ಉಳ್ಳಾಲದ ಚೈಲ್ಡ್ ಕೇರ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ : ಉಸ್ತಾದ್ ಬಂಧನ

Public TV
1 Min Read

ಮಂಗಳೂರು: ಚೈಲ್ಡ್ ಕೇರ್ ಕೇಂದ್ರದಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆ ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಒಂದು ಚೈಲ್ಡ್ ಕೇರ್ ಕೇಂದ್ರದಲ್ಲಿ 14 ವರ್ಷದ ಅಪ್ರಾಪ್ತ ಬಾಲಕನಿಗೆ ಕೇಂದ್ರದ ಉಸ್ತಾದ್ ನಿಂದಲೇ ಕಿರುಕುಳ ಆಗಿದೆ. ಕಿರುಕುಳ ನೀಡಿದ ಕೋಣಾಜೆ ಮೂಲದ ಆರೋಪಿ ಉಸ್ತಾದ್ ಆಯೂಬ್ ಮೇಲೆ ಪೋಕ್ಸೋ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಚೈಲ್ಡ್ ಕೇರ್ ಸೆಂಟರ್‌ಗಳಲ್ಲಿ ತಂದೆ ತಾಯಿಯಿಲ್ಲದ ಅನಾಥ ಮಕ್ಕಳು, ಕೌಟುಂಬಿಕ ಸಮಸ್ಯೆಗಳಿಂದ ಅನಾಥರಾಗಿರುವ ಮಕ್ಕಳು ಇರುತ್ತಾರೆ. ಈ ಮಕ್ಕಳನ್ನು ಜವಾಬ್ದಾರಿಯುತವಾಗಿ ಚೈಲ್ಡ್ ಕೇರ್ ಸೆಂಟರ್ಗಳು ಆರೈಕೆ ಮಾಡಬೇಕಾಗುತ್ತದೆ.

ಚೈಲ್ಡ್ ಕೇರ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ  ಖಚಿತ ಮಾಹಿತಿ ಕಮೀಷನರ್ ಶಶಿಕುಮಾರ್ ಅವರಿಗೆ ಬಂದಿತ್ತು. ಇದಕ್ಕಾಗಿ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ಅರಿವು ನೆರವು ಎಂಬ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಕಾರ್ಯಕ್ರಮದ ಹೆಸರಲ್ಲಿ ಚೈಲ್ಡ್ ಕೇರ್ ಸೆಂಟರಿನ ಮಕ್ಕಳನ್ನು ಕರೆಸಿಕೊಳ್ಳಲಾಯಿತು. ಈ ಕಾರ್ಯಾಗಾರದಲ್ಲಿ ಮನೋವೈದ್ಯರು, ಮಕ್ಕಳ ವೈದ್ಯರನ್ನು ಬಳಸಿಕೊಳ್ಳಲಾಯಿತು.

ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗೆಗೆ ಮಕ್ಕಳಿಂದ ಮಾಹಿತಿ ಸಂಗ್ರಹಿಸಲಾಯಿತು. ಒಂದಷ್ಟು ಪ್ರಶ್ನೋತ್ತರಗಳ ಪತ್ರಿಕೆಯನ್ನು ನೀಡಿ ಮಕ್ಕಳಿಂದ ಉತ್ತರ ಪಡೆಯಲಾಯಿತು. ಮಕ್ಕಳಿಂದ ಬಂದ ಉತ್ತರದ ಬಳಿಕ ಚೈಲ್ಡ್ ಕೇರ್ ಸೆಂಟರ್‍ನಲ್ಲಿ ನಡೆಯುತ್ತಿದ್ದ ಕರ್ಮಕಾಂಡಗಳು ಗೊತ್ತಾಗಿದೆ.

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಚೈಲ್ಡ್ ಕೇರ್ ಸೆಂಟರ್ ಇದ್ದು ಸುಮಾರು 500 ಮಕ್ಕಳು ಇದ್ದಾರೆ. ಇಡೀ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಈ ರೀತಿಯ  ಸೆಂಟರ್‌ಗಳಿದ್ದು 1,024 ಮಕ್ಕಳಿದ್ದಾರೆ. ಸದ್ಯ ಮಂಗಳೂರು ವ್ಯಾಪ್ತಿಯ ನಿಗಾ ಘಟಕಗಳ ಮಕ್ಕಳ ಪರೀಕ್ಷೆ ನಡೆಸಲಾಗಿದ್ದು, ಕಿರುಕುಳ ನೀಡುತ್ತಿದ್ದ  ಸೆಂಟರ್‌ಗಳಿಗೆ ನೋಟಿಸ್ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *