ಉಲ್ಟಾ ಹೊಡೆದ ಸಿಎಂ – ಪಂಚಮಸಾಲಿ 2ಎ ಮೀಸಲಾತಿ ಸಮಗ್ರ ಅಧ್ಯಯನಕ್ಕೆ ಸೂಚನೆ

Public TV
2 Min Read

ಬೆಂಗಳೂರು: ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸುವ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ನಮ್ಮದು ರಾಷ್ಟ್ರೀಯ ಪಕ್ಷ, ಕೇಂದ್ರ ನಾಯಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೆಳಗ್ಗೆಯಷ್ಟೇ ಸದನದಲ್ಲಿ ಹೇಳಿದ್ದ ಸಿಎಂ ಇದೀಗ ರಾತ್ರಿ ಆಗುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ. ರಾಜ್ಯದ ಲಿಂಗಾಯತ ಪಂಚಮಸಾಲಿ ಜನಾಂಗದವರು ತಮ್ಮ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿದೆ ಮತ್ತು ಸಮಾಜದ ಕಡುಬಡವರಿಗೆ ತೊಂದರೆಯಾಗುವುದರಿಂದ ಸಮಾಜವನ್ನು ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನಿಡಿದ್ದಾರೆ.

ಬೆಳಗ್ಗೆಯಷ್ಟೇ ವಿಧಾನಸಭೆಯಲ್ಲಿ ನಮ್ಮದು ರಾಷ್ಟ್ರೀಯ ಪಕ್ಷ ಎಂದು ಕೇಂದ್ರ ನಾಯಕರ ಮೇಲೆ ಬೊಟ್ಟು ಮಾಡಿದ್ದ ಯಡಿಯೂರಪ್ಪ, ಇದೀಗ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ರಾತ್ರಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಸಿಎಂ, ಅಧಿವೇಶನದಲ್ಲಿ ನನ್ನ ಹೇಳಿಕೆಯನ್ನು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅಪಾರ್ಥ ಮಾಡಿಕೊಂಡಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ನಾನು ಈಗಾಗಲೇ ಸಮಾಜದ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ಮತ್ತು ಶಾಸಕರ ಜೊತೆ ಚರ್ಚಿಸಿದ್ದೇನೆ. ಬಳಿಕ ಸಮಾಜದ ಇಬ್ಬರು ಸ್ವಾಮೀಜಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುವಂತೆ ಫೆ.4ರಂದು ಕಳುಹಿಸಿದ್ದೆ ಎಂದು ತಿಳಿಸಿದ್ದಾರೆ.

ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ವಿಷಯ ನೀಡಿ ಅಧ್ಯಯನ ಮಾಡಿ, ವರದಿ ಸಲ್ಲಿಸಲು ಕೋರಲಾಗಿದೆ. ನಾನು ಅಧಿವೇಶನದಲ್ಲಿ ಹೇಳಿದ್ದು, ನಮ್ಮದು ರಾಷ್ಟ್ರೀಯ ಪಕ್ಷ, ಸಂಸತ್ ಸದಸ್ಯರ ಜೊತೆ ಚರ್ಚಿಸಿ, ರಾಷ್ಟ್ರೀಯ ನಾಯಕರೊಂದಿಗೆ ವಿಷಯ ಮನವರಿಕೆ ಮಾಡಿಕೊಡಬೇಕು. ನಮ್ಮ ಸರ್ಕಾರ ಈ ಹಿಂದೆ ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರಿಸುವುದನ್ನು ನೆನಪಿಸಿಕೊಳ್ಳಬಹುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲ ಸಮುದಾಯಗಳ ಒಳಿತಿಗೆ ನಾನು ಬದ್ಧನಾಗಿದ್ದೇನೆ. ಇಂತಹ ಗಂಭೀರ ವಿಷಯಗಳ ಬಗ್ಗೆ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳದೆ, ತಜ್ಞರೊಂದಿಗೆ ಸಮಗ್ರವಾಗಿ ಚರ್ಚಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *