ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

Public TV
2 Min Read

– ಕಗ್ಗಂಟಾದ ಬೆಳಗಾವಿ ಅಖಾಡ?

ಬೆಂಗಳೂರು: ಎರಡು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನ ಪ್ರಕಟಿಸಿದೆ. ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿಗೂ ಮುನ್ನ ಅಭ್ಯರ್ಥಿಯ ಹೆಸರನ್ನ ಕಾಂಗ್ರೆಸ್ ಪ್ರಕಟಿಸಿದೆ.

ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?
* ಬಸವಕಲ್ಯಾಣ- ಶ್ರೀಮತಿ ಮಲ್ಲಮ್ಮ (ದಿ.ನಾರಾಯಾಣ್ ರಾವ್ ಪತ್ನಿ)
* ಮಸ್ಕಿ – ಬಸನಗೌಡ ತುರುವಿಹಾಳ
* ಸಿಂದಗಿ – ಅಶೋಕ್ ಮನಗೂಳಿ (ದಿ.ಎಂ.ಸಿ.ಮನಗೂಳಿ ಪುತ್ರ)

ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನ ಕಾಂಗ್ರೆಸ್ ಅಂತಿಮಗೊಳಿಸಿಲ್ಲ. ಶುಕ್ರವಾರ ಸಂಜೆಯೊಳಗೆ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟವಾಗುವ ಸಾಧ್ಯತೆಗಳಿವೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ಅವರ ಹೆಸರು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿದೆ.

ಶನಿವಾರ ಸಭೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಸವ ಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ಶನಿವಾರ ಬೆಳಗ್ಗೆ 11 ಕ್ಕೆ ಪಕ್ಷದ ಹಿರಿಯ ಮುಖಂಡರ ಸಭೆ ಕರೆದಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಈ ಸಭೆ ನಡೆಯಲಿದೆ. ಎಐಸಿಸಿ ವೀಕ್ಷಕರೂ ಪಾಲ್ಗೊಳ್ಳಲಿರುವ ಈ ಸಭೆಗೆ ಆಯಾ ಕ್ಷೇತ್ರಗಳ ಚುನಾವಣೆ ಉಸ್ತುವಾರಿ ಹೊತ್ತಿರುವ ಮುಖಂಡರು, ಮಾಜಿ ಮಂತ್ರಿಗಳು, ಶಾಸಕರು, ಸಂಸದರನ್ನು ಆಹ್ವಾನಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮೂರು ಕ್ಷೇತ್ರಗಳ ಮತದಾನ ಮೇ 2 ರಂದು ನಡೆಯಲಿದೆ. ಮಾರ್ಚ್‌ 30 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್‌ 4 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದೆ.

ಬೆಳಗಾವಿ ಲೋಕಸಭಾ ಸದಸ್ಯರಾಗಿದ್ದ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಕೊರೊನಾದಿಂದ ಮೃತಪಟ್ಟಿದ್ದರಿಂದ ಕ್ಷೇತ್ರ ತೆರವಾಗಿತ್ತು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಅವರು ಕೋವಿಡ್‌ ಹಾಗೂ ಬಹುಅಂಗಾಂಗ ವೈಫಲ್ಯದಿಂದ 2020ರ ಸೆಪ್ಟೆಂಬರ್‌ 24 ರಂದು ನಿಧನರಾಗಿದ್ದರು.

ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕ ಪ್ರತಾಪಗೌಡ ಪಾಟೀಲ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಹೈಕೋರ್ಟ್‌ನಲ್ಲಿ ಪ್ರತಾಪಗೌಡ ಬಿಜೆಪಿಗೆ ಸೇರ್ಪಡೆಯಾಗುವ ಮೊದಲೇ ತಕರಾರು ಅರ್ಜಿ ಸಲ್ಲಿಸಿದ್ದರು.

ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪಗೌಡ ಪಾಟೀಲ 218 ಮತಗಳ ಅಂತರದಿಂದ ಗೆದ್ದಿದ್ದಾರೆ. ಪ್ರತಾಪಗೌಡ ಪಾಟೀಲ ಅವರ ಪುತ್ರಿ ಅಮೆರಿಕದಲ್ಲಿದ್ದರೂ ಅವರ ಹೆಸರಿನಲ್ಲಿ ಮತ್ತು ಮರಣ ಹೊಂದಿದವರ ಹೆಸರಿನಲ್ಲಿ ಮತದಾನವಾಗಿವೆ. ಒಬ್ಬ ಮತದಾರನ ಹೆಸರಿನಲ್ಲಿ ಹಲವು ಮತಗಳನ್ನು ಹಾಕಲಾಗಿದೆ. ಈ ಫಲಿತಾಂಶ ರದ್ದುಪಡಿಸಬೇಕು ಎಂದು ಆರೋಪಿಸಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಬಸನಗೌಡ ತುರ್ವಿಹಾಳ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಈಗ ಉಪಚುನಾವಣಾ ದಿನಾಂಕ ಪ್ರಕಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *