ಉನ್ನತ ಶಿಕ್ಷಣಕ್ಕೆ ಉತ್ತೇಜನ, ಸಂಶೋಧನೆ ಅಗ್ರಮಾನ್ಯತೆ – ರಾಷ್ಟ್ರ ನಿರ್ಮಾಣಕ್ಕೆ ಪೂರಕ ಬಜೆಟ್ ಅಂದ್ರು ಅಶ್ವಥ್ ನಾರಾಯಣ್

Public TV
2 Min Read

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವ ಬಜೆಟ್ ಅತ್ಯುತ್ತಮವಾದದ್ದು, ಕೋವಿಡ್ ನಂತರ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಮರ್ಥವಾಗಿ ಮುನ್ನಡೆಸುವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಶ್ಲಾಘಿಸಿದ್ದಾರೆ.

ಮುಖ್ಯವಾಗಿ ಸಂಶೋಧನೆಗೆ ಹೆಚ್ಚು ಒತ್ತು ನೀಡಿರುವ ಅವರು ಮುಂದಿನ ಐದು ವರ್ಷಗಳಲ್ಲಿ 50,000 ಕೋಟಿ ರೂ.ಗಳನ್ನು ವೆಚ್ಚ ಮಾಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಈ ಹೊತ್ತಿನಲ್ಲಿ ಗುಣಮಟ್ಟದ ಶಿಕ್ಷಣ ಉದ್ದೇಶ ಸಾಕಾರಕ್ಕಾಗಿ ಈ ಉಪಕ್ರಮ ದೊಡ್ಡ ಹೆಜ್ಜೆಯಾಗಿದೆ ಎಂದಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಈ ಸಂದರ್ಭದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ. ಕಳೆದ ಬಜೆಟ್‍ನಲ್ಲಿಯೇ ಭಾರತೀಯ ಉನ್ನತ ಶಿಕ್ಷಣ ಆಯೋಗ ಸ್ಥಾಪನೆ ಬಗ್ಗೆ ಪ್ರಸ್ತಾಪ ಮಾಡಲಾಗತ್ತು. ಆಯೋಗ ರಚನೆಗೆ ಈ ವರ್ಷ ಕಾಯ್ದೆ ಜಾರಿಗೊಳಿಸುವುದಾಗಿ ವಿತ್ತ ಸಚಿವರು ಪ್ರಕಟಿಸಿದ್ದಾರೆ. ಇದರಲ್ಲಿ ಒಂದೇ ವೇದಿಕೆಯಡಿಯಲ್ಲಿ ಗುಣಮಟ್ಟ ನಿಗದಿ ಮಾಡುವುದು, ಮಾನ್ಯತೆ, ನಿಯಂತ್ರಣ ಹಾಗೂ ಹಣಕಾಸು ನೆರವಿನ ನಾಲ್ಕು ಪ್ರತ್ಯೇಕ ವಿಭಾಗಗಳಿರುತ್ತವೆ. ರಾಷ್ಟ್ರೀಯ ಉನ್ನತ ಶಿಕ್ಷಣ ಆಯೋಗ ರಚನೆಯಾದರೆ ಉನ್ನತ ಶಿಕ್ಷಣಕ್ಕೆ ಆನೆ ಬಲ ಬರಲಿದೆ ಎಂದು ತಿಳಿಸಿದ್ದಾರೆ.

ಲೇಹ್‍ನಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು ಅತ್ಯಂತ ಮಹತ್ವದ ಘೋಷಣೆ. ಪ್ರಾಥಮಿಕ ಅಂದರೆ ಶಾಲಾ ಶಿಕ್ಷಣದಲ್ಲಿ 15,000ಕ್ಕೂ ಹೆಚ್ಚು ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸಲಾಗುತ್ತದೆ ಎಂಬುದು ಕೂಡ ಪ್ರಮುಖ ಘೋಷಣೆ. ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಇವಿಷ್ಟೂ ಶಾಲೆಗಳನ್ನು ಉನ್ನತ ಮಟ್ಟಕ್ಕೇರಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂಬ ಸಚಿವರ ಹೇಳಿಕೆ ಸ್ವಾಗತಾರ್ಹ ಎಂದು ಹೇಳಿದ್ದಾರೆ.

ರೈತರಿಗೆ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆ ನಿಲ್ಲಿಸುವುದಿಲ್ಲ ಎಂದು ವಿತ್ತ ಸಚಿವರು ಘೋಷಿಸಿದ್ದಾರೆ. ಇದು ರೈತರ ಬಗ್ಗೆ ಕೇಂದ್ರ ಸರಕಾರಕ್ಕಿರುವ ಬದ್ಧತೆ. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಅನಗತ್ಯವಾಗಿ ಉಯಿಲೆಬ್ಬಿಸುವವರಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿರುವುದರಿಂದ 1.54 ಕೋಟಿ ರೈತರಿಗೆ ಪ್ರಯೋಜನವಾಗಲಿದೆ. ಇದು ಸಾಮಾನ್ಯ ಸಂಗತಿಯಲ್ಲ ಎಂದಿರುವ ಡಿಸಿಎಂ, ಕೋವಿಡ್ ಹಿನ್ನೆಲೆಯಲ್ಲಿ 27.1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿರುವುದು, ಆರೋಗ್ಯ ಕ್ಷೇತ್ರಕ್ಕೆ ಅಗ್ರಮಾನ್ಯತೆ ನೀಡಿರುವುದು ಕ್ರಾಂತಿಕಾರಕ ಅಂಶ ಎಂದು ತಿಳಿಸಿದ್ದಾರೆ.

ಬೆಂಗಳೂರು ನಗರದ ನಮ್ಮ ಮೆಟ್ರೋಗೆ 14,788 ಕೋಟಿ ರೂ. ಅನುದಾನವನ್ನು ಕೇಂದ್ರ ವಿತ್ತ ಸಚಿವರು ಘೋಷಿಸಿದ್ದಾರೆ. ಇದು ಬೆಂಗಳೂರು ಜನರಿಗೆ ಸಿಕ್ಕಿರುವ ದೊಡ್ಡ ಗಿಫ್ಟ್. ರೈಲ್ವೇ ಮಿಷನ್ 2030 ಯೋಜನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಮೆಟ್ರೋಗೆ ಹೆಚ್ಚಿನ ಅನುದಾನ ಘೋಷಣೆ ಮಾಡಿದ್ದಾರೆ. ಇದು ಸಂತಸದ ಸಂಗತಿ. ನಿರ್ಮಲಾ ಸೀತಾರಾಮನ್ ಅವರು ದೇಶವನ್ನು ಎಲ್ಲ ಆಯಾಮಗಳ ಒಳಗೊಂಡಂತೆ ಪ್ರಗತಿಯತ್ತ ಮುನ್ನಡೆಸಲು ಬೇಕಾದ ಸಮರ್ಥ ಕಾರ್ಯಸೂಚಿಯನ್ನು ಅನಾವರಣ ಮಾಡಿದ್ದಾರೆ. ಜೊತೆಗೆ ತುರ್ತು ಆದ್ಯತೆಗಳ ಬಗ್ಗೆ ಗಮನ ಹರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *