ಉತ್ಪಾದನೆ ಸ್ಥಗಿತಗೊಳಿಸಿದ ಹೆಗ್ಗೋಡು ಚರಕ ಸಂಸ್ಥೆ

Public TV
2 Min Read

ಶಿವಮೊಗ್ಗ: ಕಳೆದ 30 ವರ್ಷಗಳಿಂದ ಯಾವುದೇ ಸಂಕಷ್ಟವಿಲ್ಲದ ನಡೆಸಲಾಗುತ್ತಿದ್ದ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಚರಕ ಸಂಸ್ಥೆ ಸದ್ಯ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಹಾಗೂ ಹೆಣ್ಣು ಮಕ್ಕಳು ಚರಕದಲ್ಲಿ ನೂಲು ನೇಯಬೇಕೆಂಬ ಕನಸು ಕಂಡಿದ್ದ ಗಾಂಧೀಜಿಯವರ ಆಶಯದಂತೆ ನಡೆದಿದ್ದ ಚರಕ ಸಂಸ್ಥೆ ಕೊರೊನಾ ಲಾಕ್‍ಡೌನ್ ನಿಂದಾಗಿ ಚೇತರಿಸಿಕೊಳ್ಳಲು ಆಗದೇ ನಷ್ಟದ ಹಾದಿ ಹಿಡಿದಿದ್ದು, ಇದಕ್ಕೆ ಚೇತರಿಕೆ ನೀಡಬೇಕಾದ ಸರ್ಕಾರ ಮಾತ್ರ ನಿದ್ರೆಗೆ ಜಾರಿದೆ.

ಕೊರೊನಾ ಲಾಡೌನ್ ಹಿನ್ನೆಲೆಯಲ್ಲಿ ಕೈಮಗ್ಗದ ಉತ್ಪನ್ನಗಳು ಮಾರುಕಟ್ಟೆಯನ್ನು ಕಳೆದುಕೊಂಡಿವೆ. ಇಲ್ಲಿನ ಹೊನ್ನೇಸರದಲ್ಲಿರುವ ಚರಕ ಮಹಿಳಾ ವಿವಿಧೋದ್ದೇಶ ಸಂಘವು ಆಗಸ್ಟ್ 28 ರಿಂದ ದಿವಾಳಿ ಘೋಷಿಸಿಕೊಂಡಿದ್ದು, ನೇಕಾರರಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ನಿಲ್ಲಿಸಿದೆ.

ಪ್ರಸ್ತುತ ಕೊರೊನಾ ಸಂಕಷ್ಟದಿಂದಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಕುಸಿದಿದೆ. ಲಾಕ್‍ಡೌನ್ ಸಮಯದಲ್ಲಿ ಉತ್ಪಾದಿಸಿದ ಕೈಮಗ್ಗದ ಸಿದ್ಧ ಉಡುಪುಗಳು ಬಿಕರಿಯಾಗದೆ ಗೋದಾಮಿನ ತುಂಬಾ ತುಂಬಿದೆ. ಉತ್ಪಾದಿಸಿದ ಕೈಮಗ್ಗ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಸಿಗದೇ ಇರುವುದರಿಂದ ಇನ್ನಷ್ಟು ಉತ್ಪಾದಿಸುವ ಶಕ್ತಿ ಚರಕ ಸಂಸ್ಥೆಗೆ ಇಲ್ಲವಾಗಿದೆ. ಇದಕ್ಕೆ ಸ್ವಲ್ಪ ಮಟ್ಟಿಗೆ ಕೋವಿಡ್ ಮತ್ತು ಆರ್ಥಿಕ ಸಂಕಷ್ಟ ಕಾರಣವಾದರೆ, ಬಹಳ ದೊಡ್ಡಮಟ್ಟದಲ್ಲಿ ಕಾರಣವಾಗಿರುವುದು ನಮ್ಮ ಅಧಿಕಾರ ಶಾಹಿ ಅವರ ಮಾನಸಿಕ ಸ್ಥಿತಿ. ಸುಮಾರು ಎರಡೂವರೆ ಕೋಟಿ ರೂ. ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದ್ದು, ಆದರೆ ಇದುವರೆಗೂ ಬಿಡುಗಡೆ ಮಾಡಿಲ್ಲ. ಅದು ಬ್ಯಾಲೆನ್ಸ್ ಇದ್ದು ಇದೇ ಚರಕ ಸಂಸ್ಥೆ ನಿಲ್ಲಲು ಕಾರಣವಾಗಿದೆ.

ಅಷ್ಟಕ್ಕೂ ಚರಕ ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸಿಕೊಂಡಿದ್ದರೂ ಗ್ರಾಮೀಣ ಬಡ ಜನರ ಕೈಗೆ ಕೆಲಸ ನೀಡಲೇಬೇಕೆಂಬ ನಿಟ್ಟಿನಲ್ಲಿ ಪಣತೊಟ್ಟು ಮಣ್ಣಿನ ಕೆಲಸ, ಸಾರ್ವಜನಿಕ ಕೆರೆ ಅಭಿವೃದ್ಧಿ ಹಾಗೂ ಹಸೆ ಚಿತ್ತಾರ ಇನ್ನಿತರೇ ಕೆಲಸವನ್ನು ಚರಕ ಸಂಸ್ಥೆ ಪ್ರಾರಂಭಿಸಿದೆ.

ಆಗಸ್ಟ್ 31 ರಿಂದ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರಿ ಸಂಘದ ನೇಕಾರರು, ಬಣ್ಣಗಾರರು, ಹೊಲಿಗೆಗಾರರು, ಹಾಗೂ ಇತರೆ ಕುಶಲ ಕರ್ಮಿಗಳೆಲ್ಲ ಸೇರಿ ಎನ್‍ಆರ್ ಐಜಿ ಯೋಜನೆಯಡಿ ಹೊನ್ನೇಸರ ಗ್ರಾಮದಲ್ಲಿರುವ ಚರಕ ಶ್ರಮಜೀವಿ ಆಶ್ರಮದ ಹಿಂಭಾಗದಲ್ಲಿರುವ ವಿರೂಪಾಕ್ಷ ಕೆರೆಯ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕೆರೆ ಹೂಳೆತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಚರಕದ ಮೂಲಕ ನೂಲು ನೇಯ್ದು ಉಡುಪು ಸಿದ್ಧಪಡಿಸಿ ಮಾರುಕಟ್ಟೆಯಲ್ಲಿ ಜನರ ಅಭಿರುಚಿಗೆ ತಕ್ಕಂತೆ ಮಾರಾಟ ಮಾಡುತ್ತಿದ್ದ ಚರಕ ಸಂಸ್ಥೆ ಪ್ರಸ್ತುತ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಈಗಾಗಲೇ ಈ ವಿಷಯ ತಿಳಿದ ಬಳಿಕ ಹಲವಾರು ಸಹಾಯದ ಕರೆಗಳು ಬರುತ್ತಿದ್ದು, ಸರ್ಕಾರವೂ ಕೂಡ ಕಣ್ತೆರೆದು ದೇಶಿಯ ಉತ್ಪನ್ನದ ಸಂಸ್ಥೆ ಕಡೆ ಗಮನಹರಿಸಬೇಕಿದೆ. ಈ ಮೂಲಕ ಪ್ರಧಾನಿ ಮೋದಿ ಆಶಯದಂತಿರುವ ಆತ್ಮ ನಿರ್ಭರತೆಯ ಸಂಸ್ಥೆಯನ್ನು ಸಲುಹಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *