ಉತ್ತರ ಕರ್ನಾಟಕದಲ್ಲಿ ತಗ್ಗಿದ ಪ್ರವಾಹ – ಡ್ಯಾಂಗಳು ಭರ್ತಿ, ಕಟ್ಟೆಚ್ಚರ

Public TV
2 Min Read

ಬೆಂಗಳೂರು: ಮಳೆಯಬ್ಬರ ತಗ್ಗಿದ್ದು, ಉತ್ತರ ಕರ್ನಾಟಕದಲ್ಲೂ ಪ್ರವಾಹ ಇಳಿಮುಖವಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಕೇವಲ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಆಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಬರಬಹುದು. ಮಹಾರಾಷ್ಟ್ರದ ಪುಣೆ, ರತ್ನಗಿರಿ, ಸತಾರದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಎಚ್ಚರಿಸಲಾಗಿದೆ.

ಕಳೆದ ಆರೇಳು ದಿನಗಳಿಂದ ಆಗುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಡ್ಯಾಂಗಳು ಬಹುತೇಕ ಭರ್ತಿ ಆಗಿವೆ. ಈ ಹಿನ್ನೆಲೆಯಲ್ಲಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಬಹುದಾಗಿದ್ದು ಕೃಷ್ಣ, ಭೀಮಾ, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಜಲ ಆಯೋಗ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಕ್ಕೆ ಸಲಹೆ ನೀಡಿದೆ.

ತುಂಗಭದ್ರಾ ನದಿಗೆ 1 ಲಕ್ಷದ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಜಪದ ಕಟ್ಟೆ ಮುಳುಗಡೆ ಆಗಿದೆ. ಜಮೀನುಗಳಿಗೆ ನೀರು ನುಗ್ಗುವ ಭೀತಿ ಹಿನ್ನೆಲೆಯಲ್ಲಿ ರೈತರು ಪಂಪ್‍ಸೆಟ್‍ಗಳನ್ನ ತೆರವುಗೊಳಿಸಿದ್ದಾರೆ. ಕಲಬುರಗಿ ನಗರದ ಹೊರವಲಯದ ಭೋಸಗಾ ಕೆರೆ ತುಂಬಿದ್ದು ಜಲಪಾತ ಸೃಷ್ಟಿ ಆಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದ ಕುಂಬಾರಗಲ್ಲಿ ಜಲಾವೃತವಾಗಿದ್ದು ಸ್ಥಳೀಯರನ್ನು ಆಸರೆ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. ಆದ್ರೆ ಆಸರೆ ಕೇಂದ್ರದಲ್ಲಿ ಸೂಕ್ತ ಸೌಲಭ್ಯ ಇಲ್ಲ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.

ಹುನಗುಂದ ತಾಲೂಕಿನ ಗಂಜಿಹಾಳದಲ್ಲಿ ಪ್ರವಾಹಕ್ಕೆ ಮನೆಗಳು ಜಲಾವೃತವಾಗಿವೆ. ಮನೆ ಸಾಮಾನು, ಕೃಷಿ ಉಪಕರಣ ಎತ್ತಿಕೊಂಡು ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ. ತುಂಗಭದ್ರಾ ಜಲಾಶಯದಿಂದ ನೀರು ಬಿಡಲಾಗಿದ್ದು, ಹಂಪಿಯಲ್ಲಿ ಪುರಂದರದಾಸರ ಮಂಟಪ, ಸಾಲುಮಂಟಪ, ಧಾರ್ಮಿಕ ವಿಧಿಗಳನ್ನು ಮಾಡೋ ಮಂಟಪಗಳು ಜಲಾವೃತಗೊಂಡಿವೆ. ಹಂಪಿಯಿಂದ ವಿರೂಪಾಪುರಗಡ್ಡೆಗೆ ತೆರಳುವ ಬೋಟ್‍ಗಳನ್ನ ಸ್ಥಗಿತಗೊಳಿಸಲಾಗಿದೆ. ಕಂಪ್ಲಿ ಮತ್ತು ಗಂಗಾವತಿ ನಡುವಿನ ಸೇತುವೆಯೂ ಜಲಾವೃತಗೊಂಡಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್‍ನ ಉಪ್ಪಾರಗಲ್ಲಿ, ಹಳೆದನದಪೇಟೆ, ಕುಂಬಾರಗಲ್ಲಿ, ಮಟನ್ ಮಾರ್ಕೆಟ್ ಮತ್ತು ಮಹಾಲಿಂಗೇಶ್ವರ ನಗರ ಜಲಾವೃತಗೊಂಡಿರುವ ಕಾರಣ ಅಲ್ಲಿನ ಕುಟುಂಬಗಳಿಗೆ ಆಸರೆ ಕೇಂದ್ರ ಸ್ಥಾಪಿಸಲಾಗಿದೆ. ಘಟಪ್ರಭೆಯ ಅಬ್ಬರಕ್ಕೆ ಗೋಕಾಕ್‍ನ ಮೆಳವಂಕಿಗೆ ನೆರೆ ಬಂದಿದೆ. ಮೆಳವಂಕಿ ಸರ್ಕಾರಿ ಶಾಲೆಯಲ್ಲಿ 285 ಮಂದಿಗೆ ಆಸರೆ ನೀಡಲಾಗಿದ್ದು, ಇಲ್ಲೇ ಗರ್ಭಿಣಿಯೊಬ್ಬರು ತಮ್ಮ ಮಗುವಿನೊಂದಿಗೆ ಇದ್ದಾರೆ. ವಿಚಿತ್ರ ಅಂದ್ರೆ ಕೊರೋನ ಭಯಕ್ಕೆ ಸಂಬಂಧಿಕರು ಇವರನ್ನ ಮನೆಗೆ ಸೇರಿಸಿಕೊಳ್ಳಲು ತಯಾರಿಲ್ಲ.

Share This Article
Leave a Comment

Leave a Reply

Your email address will not be published. Required fields are marked *