ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಳೇ ಇಲ್ಲ – ಜೋಲಿಯೇ ಇಲ್ಲಿನವರಿಗೆ ಅಂಬುಲೆನ್ಸ್

Public TV
2 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೆಸರಿಗೆ ಮಾತ್ರ ಕರ್ನಾಟಕದ ಪ್ರವಾಸಿಗರ ಸ್ವರ್ಗ. ಆದರೆ ಇಲ್ಲಿನ ಜನರದ್ದು ಮಾತ್ರ ನಿತ್ಯ ನರಕಯಾತನೆ. ಪ್ರತೀನಿತ್ಯ ಈ ಜಿಲ್ಲೆಯ ಈ ಭಾಗದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಬೆಳಕಿಗೆ ಬರ್ತಾನೇ ಇರುತ್ತವೆ. ಆದರೆ ಇಲ್ಲಿನ ಶಾಸಕರಾಗಲೀ, ಸಂಬಂಧಪಟ್ಟ ಅಧಿಕಾರಿಗಳಾಗಲೀ ಕ್ಯಾರೇ ಅಂತಿಲ್ಲ.

ಹೌದು. ಒಂದೆಡೆ ಜೋಳಿಗೆಯಲ್ಲಿ ರೋಗಿಗಳನ್ನು ಹೊತ್ತು ಆಸ್ಪತ್ರೆಗೆ ಸಾಗಿಸುತ್ತಿರುವ ಗ್ರಾಮಸ್ಥರು, ಇನ್ನೊಂದೆಡೆ ಕೆಟ್ಟು ನಿಂತ ಅಂಬುಲೆನ್ಸ್‍ಗಳು, ಇದು ಉತ್ತರ ಕನ್ನಡ ಜಿಲ್ಲೆಯ ಗುಡ್ಡಳ್ಳಿ ಎಂಬ ಗ್ರಾಮದ ಶೋಚನೀಯ ಸ್ಥಿತಿ. ಕೇವಲ ಇದೊಂದೇ ಗ್ರಾಮ ಇಲ್ಲ. ಕಾರವಾರ, ಜೋಯಿಡಾ, ರಾಮನಗರ, ಶಿರಸಿ, ಸಿದ್ದಾಪುರ ಹಾಗೂ ಕುಮಟಾ ಭಾಗದ ಗಟ್ಟ ಪ್ರದೇಶದಲ್ಲಿ ವಾಸಮಾಡುವವರ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಸದ್ಯ ಗುಡ್ಡಳ್ಳಿ ಗ್ರಾಮದ ಜನರು ಮಾತ್ರ ಜೀವ ಕೈಯಲ್ಲಿ ಹಿಡಿದೇ ಜೀವನ ಸಾಗಿಸ್ತಿದ್ದಾರೆ. ಯಾಕಂದ್ರೆ ಇಲ್ಲಿ ಸಾರಿಗೆ ವ್ಯವಸ್ಥೆ ಆಗಲಿ, ರಸ್ತೆ ಸೌಕರ್ಯಗಳಾಗಲೀ ಏನೂ ಇಲ್ಲ. ಆಸ್ಪತ್ರೆಗೆ ರೋಗಿಗಳನ್ನು ಕರ್ಕೊಂಡು ಹೋಗ್ಬೇಕಂದ್ರೂ ಜೋಳಿಗೆಯೇ ಗತಿ. ಅಂದಹಾಗೆ ಹಳ್ಳಿ ಮಾತ್ರ ಅಲ್ಲ, ನಗರಪ್ರದೇಶಗಳು ಕೂಡ ಮೂಲಸೌಲಭ್ಯದಿಂದ ವಂಚಿತವಾಗಿವೆ.

ಇಡೀ ಜಿಲ್ಲೆಯಲ್ಲಿ ಪ್ರತಿ ವರ್ಷ ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಇದರಲ್ಲಿ ಅಂಬುಲೆನ್ಸ್ ಹಾಗೂ ತುರ್ತು ಚಿಕಿತ್ಸೆ ಸಿಗದೇ ಸತ್ತವರ ಸಂಖ್ಯೆ ಪ್ರತಿ ವರ್ಷ 200ರ ಗಡಿ ದಾಟುತ್ತದೆ. ಸರ್ಕಾರಿ ದಾಖಲೆ ಪ್ರಕಾರ ಕಳೆದ ಐದು ವರ್ಷದಲ್ಲಿ 1249 ಜನ ಸಾವು ಕಂಡಿದ್ದಾರೆ.

ಕಳೆದ 4 ವರ್ಷದಿಂದ ಜಿಲ್ಲೆಯ ಜನ ಸುಸಜ್ಜಿತ ನುರಿತ ವೈದ್ಯರಿರುವ ಆಸ್ಪತ್ರೆಗಾಗಿ ಬೇಡಿಕೆ ಇಟ್ಟಿದ್ರು ಕೂಡ ಸರ್ಕಾರ ಮಾತ್ರ ಆಶ್ವಾಸನೆಯಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡ್ತಿದೆ. ಆಸ್ಪತ್ರೆಗಾಗಿ ಹೋರಾಟದ ಜೊತೆಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹ್ಯಾಷ್ ಟಾಗ್ ಅಭಿಯಾನ ಚಾಲ್ತಿಯಲ್ಲಿದೆ. ಜಿಲ್ಲೆಯ ಸಮಸ್ಯೆಯನ್ನು ಖುದ್ದು ಕಿಚ್ಚ ಸುದೀಪ್, ಡಾಲಿ ಧನಂಜಯ್ ಟ್ಟೀಟ್ ಮಾಡಿ ಜಿಲ್ಲೆಯ ಜನರ ಹೋರಾಟಕ್ಕೆ ಬೆಂಬಲ ನೀಡಿದ್ರು.

ಖುದ್ದು ಸಿಎಂ ಯಡಿಯೂರಪ್ಪ ಅವರೇ, ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಆಸ್ಪತ್ರೆ ಪ್ರಾರಂಭಿಸಲು 160 ಕೋಟಿ ರೂ. ಹಣ ಮಂಜೂರು ಮಾಡುವುದಾಗಿ ಹೇಳಿದ್ದರು. ಆದರೆ ಈವರೆಗೂ ಇವೆಲ್ಲಾ ನೆನಗುದಿಗೆ ಬಿದ್ದಿದೆ. ಅತ್ತ ಕಾರವಾರದ ಶಾಸಕಿ ರೂಪಾಲಿ ನಾಯ್ಕರವರು ಶೀಘ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ಹೇಳಿದ್ದೂ ಕೇವಲ ಭ್ರಮೆಯಾಗಿ ಉಳಿದಿದೆ.

ಸದ್ಯ ಜಿಲ್ಲೆಯಲ್ಲಿ ಅಂಬುಲೆನ್ಸ್‍ಗಳ ಕೊರತೆಯಿದೆ. ಜಿಲ್ಲೆಯಲ್ಲಿ ವೆಂಟಿಲೇಷನ್ ವ್ಯವಸ್ಥೆ ಇರುವ ಅಂಬುಲೆನ್ಸ್‍ಗಳು ಎರಡು ಮಾತ್ರ. ಕಳೆದ ಒಂದು ತಿಂಗಳ ಹಿಂದೆ ಕೇಂದ್ರ ಸಚಿವ ಶ್ರೀಪಾದ್ ನಾಯ್ಕ ರವರ ಕಾರು ಅಪಘಾತವಾಗಿ ಅವರ ಪತ್ನಿ ವಿಜಯ್ ಶ್ರೀಪಾದನಾಯ್ಕರವರಿಗೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದರು. ಏನೇ ಎಮರ್ಜೆನ್ಸಿ ಇದ್ರೂ ಗೋವಾ, ಮಣಿಪಾಲ್, ಹುಬ್ಬಳ್ಳಿ ನಗರದ ಆಸ್ಪತ್ರೆಯನ್ನು ಅವಲಂಭಿಸಬೇಕಿದೆ. ಹೀಗಾಗಿ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿರುವ ಈ ಜಿಲ್ಲೆ ಮೂಲಭೂತ ಸೌಕರ್ಯವಿಲ್ಲದೇ ಜವರಾಯನ ತವರಾಗಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತು ಜಿಲ್ಲೆಗೊಂದು ಸುಸಜ್ಜಿತ ಎಮರ್ಜನ್ಸಿ ಆಸ್ಪತ್ರೆ ನಿರ್ಮಿಸಿ ಜನರ ಜೀವ ಉಳಿಸೋ ಕಾರ್ಯಕ್ಕೆ ಮುಂದಾಗಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *