ಉತ್ತರ ಕನ್ನಡ ಐದು ತಾಲೂಕುಗಳಲ್ಲಿ ನಿಷೇಧಾಜ್ಞೆ – ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್

Public TV
2 Min Read

ಕಾರವಾರ: ಪರಿವರ್ತನೆಗೊಂಡ ಕೊರೊನಾದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಪ್ರವಾಸಿ ಸ್ಥಳಗಳಲ್ಲಿ ಹೊಸ ವರ್ಷಕ್ಕೆ ಬ್ರೇಕ್ ಬಿದ್ದಿದೆ. ಐದು ತಾಲೂಕಿನಲ್ಲಿ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಜಾರಿ ಮಾಡಿ ಆದೇಶ ಹೊರಡಿಸಿದೆ.

ಒಂದೆಡೆ ಬ್ರಿಟನ್ ಸೋಂಕು ಕರ್ನಾಟಕವನ್ನು ಪ್ರವೇಶಿಸಿದೆ. ಮತ್ತೊಂದೆಡೆ ಹೊಸ ವರ್ಷದ ಆಗಮನಕ್ಕೆ ಜನ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸವರ್ಷಕ್ಕಾಗಿ ಹೋಮ್ ಸ್ಟೇ, ರೆಸಾರ್ಟ್ ಗಳು ಫುಲ್ ಆಗಿದ್ದು, ಪ್ರವಾಸಿಗರ ದಂಡು ಹರಿದುಬರುತ್ತಿದೆ. ಇತ್ತ ಜಿಲ್ಲಾಡಳಿತ ಕೂಡ ಹೊಸವರ್ಷಾಚರಣೆಗೆ ಹೆಚ್ಚಿನ ನಿಬಂಧನೆ ಇಲ್ಲದೇ ಕೇಂದ್ರ ಮತ್ತು ರಾಜ್ಯದ ಮಾರ್ಗಸೂಚಿಗಳನ್ನು ಮಾತ್ರ ಪಾಲಿಸುವಂತೆ ಸೂಚಿಸಿದ್ದವು. ಹೀಗಾಗಿ ಜಿಲ್ಲೆಯಲ್ಲಿ ಹೊಸ ವರ್ಷದ ಸಂಭ್ರಮ ಕಳೆಗಟ್ಟಿದ್ದು ರೆಸಾರ್ಟ್ ಮಾಲೀಕರು, ಹೋಮ್ ಸ್ಟೇಗಳಲ್ಲಿ ಸಿದ್ಧತೆ ಸಹ ಮಾಡಿಕೊಂಡಿದ್ದರು.

ಪ್ರವಾಸಿಗರು ಕೋವಿಡ್ ನಿಯಮಗಳನ್ನ ಪಾಲಿಸುತ್ತಿಲ್ಲ. ಜೊತೆಗೆ ಜಿಲ್ಲೆಯಲ್ಲಿ ಬ್ರಿಟನ್ ನಿಂದ ಒಟ್ಟು 15 ಜನ ಮರಳಿದ್ದು ಇವರ ಕೋವಿಡ್ ಪರಿಕ್ಷೆಯಲ್ಲಿ ನೆಗಟಿವ್ ಬಂದಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ರವರು ಪ್ರವಾಸಿಗರು ಹೆಚ್ಚಾಗಿ ಬರುವ ಐದು ತಾಲೂಕುಗಳಲ್ಲಿ ನಿಷೇದಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

144 ಸೆಕ್ಷನ್ ಜಾರಿ: ಕರಾವಳಿ ಪ್ರವಾಸಿ ತಾಲೂಕುಗಳಾದ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ದಿನಾಂಕ 31/12/2020ರ ಸಂಜೆ 4 ರಿಂದ 1/01/2021 ರ ವರೆಗ ಬೆಳಗ್ಗೆ ಆರು ಗಂಟೆವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಆದರೆ ಮಲೆನಾಡು ಭಾಗವಾದ ಶಿರಸಿ, ಮುಂಡಗೋಡು, ಯಲ್ಲಾಪುರ, ದಾಂಡೇಲಿ, ಜೋಯಿಡಾ ಭಾಗಕ್ಕೆ ವಿನಾಯ್ತಿ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚು ಜನ ಸೇರುವ ಸಾಧ್ಯತೆಗಳಿದ್ದು 700 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಪ್ರವಾಸಿಗರು ಹೆಚ್ಚು ಬರುವುದರಿಂದ ಜಿಲ್ಲೆಯಲ್ಲಿ ಅಪಘಾತ ಸಂಖ್ಯೆ ಸಹ ಹೆಚ್ಚಾಗಿದ್ದು, 20 ,108 ವಾಹನ ವ್ಯವಸ್ಥೆ ಸಹ ಮಾಡಲಾಗಿದೆ. ಬೀಚ್ ಗಳಲ್ಲಿ ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ, ಲೈಫ್ ಗಾರ್ಡ ತಂಡವನ್ನು ಸಜ್ಜುಗೊಳಿಸಲಾಗಿದೆ.

ಯಾವುದೇ ಪ್ರದೇಶಗಳಲ್ಲಿ ಐದು ಜನರಿಗಿಂತ ಹೆಚ್ಚು ಜನ ಒಟ್ಟಿಗೆ ಸೇರಲು ನಿರ್ಭಂಧ ಮಾಡಲಾಗಿದ್ದು ಸಭೆ, ಸಮಾರಂಭ, ಡಿ.ಜೆ ಎಲ್ಲದಕ್ಕೂ ನಿಷೇಧ ಹೇರಲಾಗಿದೆ. ನಿಯಮ ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಪ್ರವಾಸಿಗರು ಜಿಲ್ಲೆಯ ಕರಾವಳಿ ಭಾಗಕ್ಕೆ ಬಂದಿಳಿದಿದ್ದಾರೆ. ಆದರೆ ಕೊರೊನಾ ನಿಯಮವನ್ನು ಪಾಲನೆ ಮಾಡದೇ ಬೇಕಾ ಬಿಟ್ಟಿ ಪ್ರವಾಸಿಗರು ವರ್ತಿಸುತ್ತಿರುವುದರಿಂದ ಕರಾವಳಿ ಭಾಗದಲ್ಲಿ ಜಿಲ್ಲಾಡಳಿತ ನಿಷೇದಾಜ್ಞೆ ಜಾರಿ ಮಾಡಿದೆ. ಒಟ್ಟಿನಲ್ಲಿ ಕರಾವಳಿ ಭಾಗದಲ್ಲಿ ಕಳೆಗಟ್ಟಿದ್ದ ಹೊಸ ವರ್ಷದ ಸಂಭ್ರಮಕ್ಕೆ ನಿಷೇದಾಜ್ಞೆಯ ಬ್ರೇಕ್ ಬಿದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *