ಉತ್ತರ ಕನ್ನಡದಲ್ಲಿ ಮತ್ತೊಂದು ಪಾಸಿಟಿವ್- ಹೊನ್ನಾವರಕ್ಕೂ ಕಾಲಿಟ್ಟ ಕೊರೊನಾ

Public TV
1 Min Read

– ಮುಂಬೈ ಮೂಲ, ಬೆಳಗಾವಿಯಿಂದ ಬಸ್‍ನಲ್ಲಿ ಪ್ರಯಾಣ
– ಈತನೊಂದಿಗೆ 25 ಜನ ಪ್ರಯಾಣ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೂ ಕೊರೊನಾ ಕಾಲಿಟ್ಟಿದ್ದು, ಈ ಮೂಲಕ ಹೊನ್ನಾವರದಲ್ಲಿ ಮೊದಲ ಪ್ರಕರಣ ಪತ್ತೆಯಾದಂತಾಗಿದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ಬಸ್‍ನಲ್ಲಿ ಈತನೊಂದಿಗೆ ಬೆಳಗಾವಿಯಿಂದ ಭಟ್ಕಳದ ವರೆಗೆ 25 ಜನ ಪ್ರಯಾಣ ಮಾಡಿದ್ದಾರೆ.

ಹೊನ್ನಾವರದ ಬಂದರು ರಸ್ತೆಯ ನಿವಾಸಿ 50 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಡಪಟ್ಟಿದೆ. ಬೆಳಗಾವಿ ಮೂಲಕ 25 ಜನರೊಂದಿಗೆ ಮುಂಬೈನಿಂದ ಭಟ್ಕಳಕ್ಕೆ ಬಂದು ಇಳಿದಿದ್ದು, 11 ಜನ ಭಟ್ಕಳದವರು ಸಹ ಇದ್ದರು. ಉಳಿದವರು ಉಡುಪಿಯವರಾಗಿದ್ದಾರೆ. ಈತ ಹಾಗೂ ಈತನೊಂದಿಗೆ ಬಂದಿದ್ದವರನ್ನು ಭಟ್ಕಳದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಜ್ವರ ಕಾಣಿಸಿಕೊಂಡ ಕಾರಣ ಭಟ್ಕಳದಿಂದ ಹೊನ್ನಾವರದ ಈತನ ಊರಿಗೆ ಕರೆದೊಯ್ದು, ಕ್ವಾರಂಟೈನ್ ಮಾಡಲಾಗಿತ್ತು. ನಂತರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕು ಪತ್ತೆಯಾಗಿರುವ ವ್ಯಕ್ತಿಯೊಂದಿಗೆ ಉಡುಪಿ ಹಾಗೂ ಭಟ್ಕಳದ 25 ಜನ ಸಹ ಬಂದಿದ್ದು, ಇವರೆಲ್ಲರನ್ನೂ ಭಟ್ಕಳ ಹಾಗೂ ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಉಡುಪಿಯಲ್ಲಿ ಕ್ವಾರಂಟೈನ್ ಆದವರಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಹೊನ್ನಾವರದ ವ್ಯಕ್ತಿಗೂ ಪಾಸಿಟಿವ್ ಬಂದಿದ್ದು, ಈತನೊಂದಿಗೆ ಭಟ್ಕಳದಲ್ಲಿ ಕ್ವಾರಂಟೈನ್ ಆದವರ ವರದಿ ಬರುವುದು ಬಾಕಿ ಇದೆ.

ಕಾರವಾರದ ಆಸ್ಪತ್ರೆಗೆ ರೋಗಿ ಶಿಫ್ಟ್
ಬೆಳಗಿನ ಬುಲಟಿನ್‍ನಲ್ಲಿ ಈತನ ವರದಿ ಪ್ರಕಟವಾಗಬೇಕಿತ್ತು. ಆದರೆ ಆಗಿರಲಿಲ್ಲ, ಮಧ್ಯಾಹ್ನದ ವರದಿಯಲ್ಲಿ ಈತನ ಹೆಸರು ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೀಗ ಹೊನ್ನಾವರದ ಸರ್ಕಾರಿ ಆಸ್ಪತ್ರೆಯಿಂದ ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್-19 ವಾರ್ಡ್ ಗೆ ಸ್ಥಳಾಂತರಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು 37ಕ್ಕೆ ಏರಿಕೆಯಾಗಿದ್ದು, ಡಿಸ್‍ಚಾರ್ಜ್ ಆದ 32 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 69 ಪ್ರಕರಣಗಳು ಪತ್ತೆಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *