ಉತ್ತರಕನ್ನಡದಲ್ಲಿ 50ರ ಗಡಿ ದಾಟಿದ ಕೊರೊನಾ- ಜಿಲ್ಲೆಗೆ ಮುಂಬೈ ಕಂಟಕ

Public TV
1 Min Read

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 8 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯ ಭಟ್ಕಳ ಮೂಲದ ಇಬ್ಬರಿಗೆ ಹೊನ್ನಾವರ ಮೂಲದ ನಾಲ್ವರಿಗೆ ಹಾಗೂ ಮುಂಡಗೋಡ ಮೂಲದ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಇಂದು ಧೃಢಪಟ್ಟ 8 ಜನರಲ್ಲಿ 7 ಜನ ಮುಂಬೈನಿಂದ ವಾಪಾಸ್ ಜಿಲ್ಲೆಗೆ ಬಂದಿದ್ದು, ಭಟ್ಕಳ ಮೂಲದ ಎರಡು ವರ್ಷದ ಬಾಲಕಿಗೆ ಮಾತ್ರ ಈಗಾಗಲೇ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಸೋಂಕು ತಗುಲಿರುವ ರೋಗಿ 659ರ ಸಂಪರ್ಕದಿಂದ ಸೋಂಕು ತಗುಲಿದೆ. ಹೊನ್ನಾವರದ ನಾಲ್ವರು ಸೋಂಕಿತರು ಒಂದೇ ಕುಟುಂಬದವರಾಗಿದ್ದು ಎಲ್ಲರು ಮುಂಬೈನಿಂದ ಬಂದ ನಂತರ ಪಟ್ಟಣದ ಪ್ರಭಾತ್ ನಗರದಲ್ಲಿ ಇರುವ ಬಿ.ಸಿ.ಎಂ ಹಾಸ್ಟಲ್‍ನಲ್ಲಿ ಕ್ವಾರಂಟೈನ್‍ನಲ್ಲಿ ಇದ್ದರು.

ಇದೀಗ ಪ್ರಭಾತ್ ನಗರವನ್ನು ಸೀಲ್‍ಡೌನ್ ಮಾಡಲಾಗಿದೆ. ಮುಂಬೈ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಮುಂಡಗೋಡ ತಾಲೂಕಿನ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಎರಡು ಗ್ರಾಮದಲ್ಲಿ ಜನರ ಓಡಾಟವನ್ನ ನಿರ್ಬಂಧಿಸಲಾಗಿದೆ. ಇದಲ್ಲದೇ ಮುಂಬೈನಿಂದ ವಾಪಸ್ ಬಂದು ಮುರಡೇಶ್ವರದ ಹೋಟೆಲಿನಲ್ಲಿ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಗೆ ಸೋಂಕು ತಗುಲಿದ್ದು, ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಬಂದಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ. ಇದು ಜಿಲ್ಲಾಡಳಿತಕ್ಕೆ ಇದು ದೊಡ್ಡ ತಲೆ ನೋವಾಗಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಅರ್ಧ ಶತಕಕ್ಕೆ ಬಂದು ತಲುಪಿದೆ. ಸದ್ಯ 40 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಇದ್ದು, ಒಟ್ಟು ಸೋಂಕಿತರ ಸಂಖ್ಯೆ 51 ಆಗಿದೆ. 11 ಮಂದಿ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಓರ್ವ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 30 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಆಯಾ ತಾಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿದೆ. ಭಟ್ಕಳ ಪಟ್ಟಣವೊಂದರಲ್ಲೇ ಒಟ್ಟು 44 ಸೋಂಕಿತರು ಇದ್ದು, 33 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. 11 ಮಂದಿ ಗುಣಮುಖರಾದವರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *