ಉತ್ತಮ ಪೌಷ್ಠಿಕ ಆಹಾರ, ಕಷಾಯ ಸೇವಿಸಿ- ಕೊರೊನಾ ಗೆದ್ದ ಜನಾರ್ದನ ಪೂಜಾರಿ ಸಲಹೆ

Public TV
1 Min Read

ಮಂಗಳೂರು: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು ಕೊರೊನಾ ಎಂಬ ಮಹಾಮಾರಿ ವೈರಸನ್ನು ಗೆದ್ದು ಬಂದಿದ್ದು, ಉತ್ತಮ ಪೌಷ್ಠಿಕ ಆಹಾರ, ಕಷಾಯ ಸೇವನೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಹೌದು. 83ರ ಹರೆಯದ ಜನಾರ್ದನ ಪೂಜಾರಿ ಅವರಿಗೆ ಜುಲೈ 4ರಂದು ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಕೇವಲ ಪೂಜಾರಿ ಮಾತ್ರವಲ್ಲದೆ ಅವರ ಕುಟುಂಬಕ್ಕೂ ಕೊರೊನಾ ಅಂಟಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡಗಡೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜನಾರ್ದನ ಪೂಜಾರಿ ನಿವಾಸವಿದ್ದು, ಮನೆಯ ಕೆಲಸದಾಕೆಯಿಂದ ಪೂಜಾರಿ ಕುಟುಂಬಕ್ಕೆ ಕೊರೊನಾ ಸೋಂಕು ಹರಡಿತ್ತು.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಜನಾರ್ದನ ಪೂಜಾರಿ, ನನ್ನ ಆರೋಗ್ಯಕ್ಕಾಗಿ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಾನು ಹಾಗೂ ನನ್ನ ಕುಟುಂಬದ ಮೂವರು ಸದಸ್ಯರು ಜುಲೈ 4ರಂದು ನಗರದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದೆವು. ದೈವ-ದೇವರ ಅನುಗ್ರಹ ಹಾಗೂ ನಿಮ್ಮೆಲ್ಲರ ಹಾರೈಕೆಯಿಂದ ನಾವೆಲ್ಲರೂ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತೇವೆ. ನಮ್ಮ ಕ್ಷೇಮಕ್ಕಾಗಿ ಪ್ರಾರ್ಥಿಸಿದ ಎಲ್ಲ ಬಂಧುಗಳು, ಹಿತೈಷಿಗಳು ಹಾಗೂ ಉತ್ತಮ ಚಿಕಿತ್ಸೆ ನಿಡಿದ ವೈದ್ಯರು, ದಾದಿಯರು, ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇದೇ ವೇಳೆ ಕೊರೊನಾ ವೈರಸ್‍ಗೆ ಭಯಪಡಬೇಡಿ ಬದಲಾಗಿ ಜಾಗ್ರತೆ ವಹಿಸಿ ಎಂದು ಪೂಜಾರಿ ಆತ್ಮಸ್ಥೈರ್ಯ ತುಂಬುವ ಕೆಲಸ ಕೂಡ ಮಾಡಿದ್ದಾರೆ. ಕೊರೊನಾ ರೋಗಕ್ಕೆ ಯಾರೂ ಭಯಪಡಬೇಕಾಗಿಲ್ಲ. ಪ್ರತಿಯೊಬ್ಬರೂ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಿ ಹಾಗೆಯೇ ರೋಗ ನಿರೋಧಕ ಶಕ್ತಿ ವೃದ್ಧಿಸಲು ಉತ್ತಮ ಪೌಷ್ಠಿಕ ಆಹಾರ, ಕಷಾಯ ಸೇವನೆ ಮಾಡಿ. ಈ ಮೂಲಕ ಪ್ರತಿಯೊಬ್ಬರು ಜಾಗ್ರತೆ ವಹಿಸಿ. ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪೂಜಾರಿ ವಿನಂತಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *