ಉಡುಪಿ: ನಾನು ಸಂಘಟನೆಯ ಅಡಿಯಲ್ಲಿ ಸಂಸ್ಕಾರಯುತವಾಗಿ ಬೆಳೆದು ಬಂದವ. ಸಮಸ್ಯೆ ಅರಿತು ಸಚಿವರು ಸರ್ಕಾರಕ್ಕೆ ಸಹಕಾರ ಕೊಡಬೇಕು ಎಂದು ಮೀನುಗಾರಿಕೆ ಬಂದರು ಸಚಿವ ಎಸ್ ಅಂಗಾರ ಕಿವಿಮಾತು ಹೇಳಿದ್ದಾರೆ.
ರಾಜ್ಯದಲ್ಲಿ ಖಾತೆ ಹಂಚಿಕೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸಚಿವ ಅಂಗಾರ ಪ್ರತಿಕ್ರಿಯೆ ನೀಡಿದ್ದಾರೆ. ನನ್ನನ್ನು ಆರು ಅವಧಿಗೆ ಜನ ಗೆಲ್ಲಿಸಿದರು. ಅಧಿಕಾರದ ಹಿಂದೆ ಹೋಗಿಲ್ಲ, ಅಧಿಕಾರವೇ ನನ್ನ ಹಿಂದೆ ಬಂದಿದೆ. ಹೀಗಿರುವ ಖಾತೆ ಹಂಚಿಕೆ ಸಮಸ್ಯೆ ಬಗ್ಗೆ ಪಕ್ಷದ ಹಿರಿಯರು ಗಮನ ಕೊಡುತ್ತಾರೆ ಎಂದರು.
ಸರ್ಕಾರದ ಒಳಗಿರುವ ಎಲ್ಲರಿಗೂ ಒಂದೇ ರೀತಿ ಆಲೋಚನೆ ಇರಬೇಕು. ನಮ್ಮ ಆಲೋಚನೆಯಲ್ಲಿ ವ್ಯತ್ಯಾಸ ಆದರೆ ರಾಜ್ಯಕ್ಕೆ ಸಮಸ್ಯೆ ಬರುತ್ತದೆ. ಉತ್ತಮ ಆಡಳಿತ ಕೊಡುವ ಮನೋಭಾವನೆ ಇದ್ದರೆ ಖಾತೆ ಕ್ಯಾತೆ ಬರುವುದಿಲ್ಲ ಎಂದು ಅಸಮಾಧಾನಿತ ಸಚಿವರಿಗೆ ಅಂಗಾರ ಚಿವುಟಿದರು.
ಈಗಷ್ಟೇ ಮೀನುಗಾರಿಕೆ ಬಂದರು ಒಳನಾಡು ಖಾತೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಕೆಲದಿನಗಳ ಕಾಲ ಕಾರ್ಯವ್ಯಾಪ್ತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇನೆ. ಮೀನುಗಾರರ ಬೇಡಿಕೆ ಸಮಸ್ಯೆಗಳನ್ನು ಅರಿತುಕೊಂಡು ಅವರ ಹಿತ ಕಾಪಾಡುವ ಕೆಲಸವನ್ನು ಮಾಡುತ್ತೇನೆ. ಬಂದರು ಮೀನುಗಾರರ ಕುಟುಂಬ ಸಮುದ್ರತೀರಕ್ಕೆ ಮುಂದಿನ ದಿನಗಳಲ್ಲಿ ಭೇಟಿಕೊಟ್ಟು ಅನುಭವವನ್ನು ಪಡೆದುಕೊಳ್ಳುತ್ತೇನೆ ಎಂದು ಈ ಸಂದರ್ಭದಲ್ಲಿ ಸಚಿವ ಅಂಗಾರ ಹೇಳಿದರು.