ಉಡುಪಿ: ಕೆಥೊಲಿಕ್ ಧರ್ಮಪ್ರಾಂತ್ಯದ ಯುವ ಆಯೋಗದ ನೂತನ ಕಾರ್ಯದರ್ಶಿ ಮತ್ತು ಭಾರತೀಯ ಕೆಥೊಲಿಕ್ ಯುವ ಸಂಘಟನೆಯ ನಿರ್ದೇಶಕರಾಗಿ ಫಾ. ಚಾರ್ಲ್ಸ್ ಮಿನೇಜಸ್ ಅವರನ್ನು ನೇಮಕಗೊಳಿಸಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಆದೇಶ ಹೊರಡಿಸಿದ್ದಾರೆ.
ಧರ್ಮಪ್ರಾಂತ್ಯದ ಯುವ ಆಯೋಗದ ನೂತನ ಕಾರ್ಯದರ್ಶಿ ಮತ್ತು ಭಾರತೀಯ ಕೆಥೊಲಿಕ್ ಯುವ ಸಂಘಟನೆಯ ನಿರ್ದೇಶಕರಾಗಿ ಫಾ.ಚಾರ್ಲ್ಸ್ ಮಿನೇಜಸ್ ಅವರು ಸೋಮವಾರ ಧರ್ಮಾಧ್ಯಕ್ಷರ ನಿವಾಸದಲ್ಲಿ ಅಧಿಕಾರ ವಹಿಸಿಕೊಂಡರು.
ಧರ್ಮಾಧ್ಯಕ್ಷರಾದ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ನೂತನ ನಿರ್ದೇಶಕರಿಗೆ ಅಧಿಕಾರ ಸ್ವೀಕಾರದ ಪ್ರಮಾಣ ವಚನವನ್ನು ಭೋದಿಸಿದರು. ನಿರ್ಗಮನ ನಿರ್ದೇಶಕ ಹಾಗೂ ಪ್ರಸ್ತುತ ವೈಸಿಎಸ್ ಸಂಘಟನೆಯ ಚಾಪ್ಲೆಯ್ನ್ ಎಡ್ವಿನ್ ಡಿಸೋಜಾ ಅವರು ನೂತನ ನಿರ್ದೇಶಕರಿಗೆ ಸಂಘಟನೆಯ ದಾಖಲೆಗಳನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ಚಾರ್ಲ್ಸ್ ಮಿನೇಜಸ್ ಮೂಲತಃ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಧರ್ಮ ಕೇಂದ್ರಕ್ಕೆ ಸೇರಿದವರಾಗಿದ್ದು 1991 ರಲ್ಲಿ ಧರ್ಮಗುರುವಾಗಿ ದೀಕ್ಷೆ ಪಡೆದವರು. ಬಳಿಕ ಆಗ್ರಾರ್, ಕುಲಶೇಖರ ಮತ್ತು ವಿಟ್ಲ ಧರ್ಮಕೇಂದ್ರಗಳಲ್ಲಿ ಸಹಾಯಕ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದಾರೆ. 1997-2005 ರ ವರೆಗೆ ಮಂಗಳೂರು ಧರ್ಮಪ್ರಾಂತ್ಯದ ವೈಸಿಎಸ್ ಮತ್ತು ವೈಎಸ್‍ಎಂ ಸಂಘಟನೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಬಳಿಕ 5 ವರ್ಷ ನೀರು ಮಾರ್ಗ ಧರ್ಮಕೇಂದ್ರದ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದು, ಬಳಿಕ 2010-15 ರವರೆಗೆ. ಧರ್ಮಪ್ರಾಂತ್ಯದ ವೈಸಿಎಸ್ ಮತ್ತು ವೈಎಸ್‍ಎಂ ಸಂಘಟನೆಯ ರಾಷ್ಟ್ರೀಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಚಾರ್ಲ್ಸ್ ಅವರು 2015 ರಲ್ಲಿ ಐವೈಸಿಎಸ್ ಸಂಘಟನೆ ಅಂತರಾಷ್ಟ್ರೀಯ ಚಾಪ್ಲೆಯ್ನ್ ಆಗಿ ನೇಮಕಗೊಂಡು 2019 ರವರೆಗೆ ಸೇವೆ ಸಲ್ಲಿಸಿದರು. ಪ್ರಸ್ತುತ ಅವರು ಉಡುಪಿ ಶೋಕ ಮಾತಾ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.