ಉಡುಪಿ/ ಕಲಬುರಗಿ: ಕರುನಾಡಿನಲ್ಲಿ ಕೊರೋನಾರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೃಷ್ಣನಗರಿ ಉಡುಪಿಯಲ್ಲಿ ಕೊರೊನಾ ಕಂಸನ ರೂಪವನ್ನೇ ತಳೆದಿದ್ದು ಜನ ಕೃಷ್ಣ ಕೃಷ್ಣ ಎನ್ನುವಂತಾಗಿದೆ. ಅತ್ತ ಕಲಬುರಗಿಯನ್ನು ಮುಂಬೈನ ಧಾರಾವಿ ಸ್ಲಂ ಕಂಗಾಲಾಗಿಸಿದೆ.
ಕೃಷ್ಣನಗರಿ ಉಡುಪಿಯಲ್ಲಿ ಸೋಮವಾರ ಒಂದೇ ದಿನ ಬರೋಬ್ಬರಿ 32 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ಈ ಪೈಕಿ 28 ಮುಂಬೈಯಿಂದ ಬಂದವರಿಗೆ, ದುಬೈನಿಂದ ಬಂದ ಇಬ್ಬರಲ್ಲಿ ಕೋವಿಡ್ ಧೃಡಪಟ್ಟಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 108ನ್ನು ಮುಟ್ಟಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಜಿಗಿತ ಕಾಣಿಸುತ್ತಿರುವ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ. ಹೀಗೆ ಮುಂದುವರಿದರೆ ಉಡುಪಿ ಡೇಂಜರ್ ಝೋನ್ ತಲುಪುವ ಆತಂಕ ಎದುರಾಗಿದೆ.
ಉಡುಪಿ ಜಿಲಾ ್ಲಪಂಚಾಯತ್ ನೌಕರನಿಗೂ ಸೋಂಕು ತಟ್ಟಿದೆ. ಸ್ವಚ್ಛ ಭಾರತ್ ಮಿಷನ್ ವಿಭಾಗದ ಸಿಬ್ಬಂದಿಯಲ್ಲಿ ಡೆಡ್ಲಿ ವೈರಸ್ ಇರುವುದು ದೃಢಪಟ್ಟಿದೆ. ಇದರಿಂದ ಇಂದು ಇಡೀ ಜಿಲ್ಲಾ ಪಂಚಾಯ್ತಿ ಕಚೇರಿನ ಸಂಪೂರ್ಣ ಬಂದ್ ಮಾಡಲಾಗ್ತಿದೆ. ಸ್ಯಾನಿಟೈಸ್ ಮಾಡಿದ ಬಳಿಕ ಮತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಸಿಇಒ ಪ್ರೀತಿ ಗೆಹ್ಲೊಟ್ ತಿಳಿಸಿದ್ದಾರೆ.
ಕೊರೊನಾ ತನ್ನ ಕಬಂಧಬಾಹುಗಳನ್ನು ಉಡುಪಿ ಜಿಲ್ಲೆಯಾದ್ಯಂತ ಚಾಚಿದೆ. ಹಗಲುರಾತ್ರಿ ಕೊರೊನಾ ವಿರುದ್ಧ ಹೋರಾಡುತ್ತಿದ್ದ ಇಬ್ಬರು ಕೊರೊನಾ ವಾರಿಯರ್ಸ್ ನಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ಭಾನುವಾರ ಮೂವರು ಪೊಲೀಸರಲ್ಲಿ ಸೊಂಕು ಧೃಡಪಟ್ಟಿತ್ತು.
ಕರುನಾಡಿಗೆ ಕೊರೊನಾ ಕಾಲಿಟ್ಟಾಗ ಉಡುಪಿಯಲ್ಲಿ ಈಗಿನಷ್ಟು ಪರಿಸ್ಥಿತಿ ಕೈ ಮೀರಿರಲಿಲ್ಲ. ಇಡೀ ಮಾರ್ಚ್ ತಿಂಗಳಿನಲ್ಲಿ ಕೇವಲ 3 ಪಾಸಿಟಿವ್ ಕೇಸ್‍ಗಳಷ್ಟೇ ದೃಢಪಟ್ಟಿದ್ದವು. ಆದರೆ ಉಡುಪಿಯನ್ನು ಮೇ ತಿಂಗಳು ಹಿಂಡಿ ಹಿಪ್ಪೆ ಮಾಡಿದೆ. ಮೇ ತಿಂಗಳು ಮುಗಿಯಲು ಇನ್ನು 5 ದಿನಗಳು ಬಾಕಿ ಇರುವಾಗಲೇ ಬರೋಬ್ಬರಿ 108 ಕೇಸ್‍ಗಳು ದಾಖಲಾಗಿವೆ. ಈ ಪೈಕಿ 102 ಸೋಂಕಿತರಿಗೆ ಕೊರೊನಾ ಹೇಗೆ ಬಂತು ಎಂಬುವುದು ತಿಳಿದು ಬಂದಿದೆ. ಆದರೆ ಜಿಲ್ಲೆಯ ಆರು ಜನರಿಗೆ ಕೊರೊನಾ ಸೋಂಕು ಅಂಟಿದ್ದೆಲ್ಲಿ ಎಂಬೂದೇ ನಿಗೂಢವಾಗಿ ಉಳಿದಿದೆ. ಇದು ಆರೋಗ್ಯಾಧಿಕಾರಿಗಳು, ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
ಈ ಮಧ್ಯೆ ಕಾರ್ಕಳದ 9 ತಿಂಗಳ ತುಂಬು ಗರ್ಭಿಣಿಗೆ ಸೋಂಕು ತಗುಲಿದ ಮೂಲ ತಿಳಿದಿಲ್ಲ. ಮಹಾರಾಷ್ಟ್ರದಿಂದ ಬಂದ ಏಳು ಸಾವಿರ ಮಂದಿಯಲ್ಲಿ 4000 ಜನರ ಕೊರೊನಾ ರಿಪೋರ್ಟ್ ಬರಬೇಕಿದೆ. ದಿನಕ್ಕೆ 500 ವರದಿಗಳು ಬರುತ್ತಿದ್ದು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ಇತ್ತ ದೇಶದಲ್ಲೇ ಮೊದಲ ಕೊರೋನಾ ಸಾವು ಕಂಡಿದ್ದ ಕಲಬುರಗಿಯಲ್ಲಿ ಕೊರೊನಾ ಅಬ್ಬರ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಮಹಾರಾಷ್ಟ್ರದಿಂದ ಹಿಂತಿರುಗಿರುವ ವಲಸೆಗರಿಂದ ಮತ್ತಷ್ಟು ಸೋಂಕು ಜಿಲ್ಲೆಯನ್ನು ಆವರಿಸಿದೆ. ನಿನ್ನೆ ಒಂದೇ ದಿನ 14 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಎಲ್ಲರೂ ಮುಂಬೈನಿಂದ ಬಂದ ವಲಸೆ ಕಾರ್ಮಿಕರು.
ಕಲಬುರಗಿಯಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ 157ಕ್ಕೆ ಏರಿಕೆಯಾಗಿದೆ. ಇದರಲ್ಲಿ 74 ಸೋಂಕಿತರು ಮುಂಬೈನ ಧಾರಾವಿ ಸ್ಲಂನಿಂದಲೇ ಬಂದಿದ್ದವರಾಗಿದ್ದಾರೆ. ಧಾರವಿ ಎಫೆಕ್ಟ್‍ನಿಂದಲೇ ಕಲಬುರಗಿಯಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರಿದೆ.