ಉಡುಪಿಯ ಹೆಜಮಾಡಿ ನಡಿಕುದ್ರುವಿನಲ್ಲಿ ‘ಸೀ ಪ್ಲೇನ್’ ಅನ್ವೇಷಣೆ

Public TV
2 Min Read

– ಏನು ಸೀ ಪ್ಲೇನ್ ವಿಶೇಷತೆ?

ಉಡುಪಿ: ನಮ್ಮಲ್ಲಿ ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರದ ಚರ್ಚೆ ಜೊರಾಗಿ ನಡೆಯುತ್ತಿದೆ. ಇದೇ ಕಲ್ಪನೆಯಲ್ಲಿ ಉಡುಪಿಯ ಯುವಕರು ಸೀ ಪ್ಲೇನ್ ಸಿದ್ಧ ಮಾಡಿದ್ದಾರೆ. ಒಬ್ಬ ವ್ಯಕ್ತಿ ಕುಳಿತು ನೀರಲ್ಲಿ ತೇಲುವ ಬಾನಲ್ಲಿ ಹಾರುವ ಮೈಕ್ರೋಲೈಟ್ ಸೀ ಪ್ಲೇನ್ ನ ಯಶಸ್ವಿ ಹಾರಾಟ ಕೂಡಾ ನಡೆದಿದ್ದು, ರಾಜ್ಯ, ಕೇಂದ್ರ ಸರ್ಕಾರದ ಸಹಾಯಕ್ಕೆ ಉತ್ಸಾಹಿ ಎಂಟು ಯುವಕರು ಕಾಯುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಭಾರತದ ಮೊದಲ ಸೀ ಪ್ಲೈನ್ ಉದ್ಘಾಟಿಸಿದ್ದರು. ವಿದೇಶದಿಂದ ಖರೀದಿಸಿದ ವಿಮಾನ ನರ್ಮದಾ ನದಿಯಲ್ಲಿ ಯಶಸ್ವಿಯಾಗಿ ಹಾರಾಟ ಮಾಡಿತ್ತು. ಉಡುಪಿಯ ಹೆಜಮಾಡಿ ಶಾಂಭವಿ ನದಿಯಲ್ಲೂ ಮೈಕ್ರೋಲೈಟ್ ಸೀ ಪ್ಲೈನ್ ಯಶಸ್ವಿಯಾಗಿ ಹಾರಾಟ ನಡೆಸಿದೆ.

ವಿಮಾನ ತಯಾರಿಸುವ ಕನಸು:
ಹೆಜಮಾಡಿ ನಡಿಕುದ್ರು ನಿವಾಸಿ ಪುಷ್ಪರಾಜ್ ಅಮೀನ್ ಈ ಅನ್ವೇಷಣೆಯ ಮಾಸ್ಟರ್ ಮೈಂಡ್. ಏರ್ ಮಾಡೆಲಿಂಗ್, ಎನ್ ಸಿಸಿ ಇನ್ ಸ್ಟ್ರಕ್ಟರ್ ಆಗಿರುವ ಪುಷ್ಪರಾಜ್ 15 ವರ್ಷಗಳ ಕಾಲ ಪರಿಶ್ರಮ ಪಟ್ಟು ಮೈಕ್ರೋಲೈಟ್ ಸೀ ಪ್ಲೇನ್ ಸಿದ್ಧಪಡಿಸಿದ್ದಾರೆ. ಏರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನೊಳಗೊಂಡ ”ಧೃತಿ” ಅನ್ನೋ ಸಂಸ್ಥೆ ಹೆಸರಿನಡಿಯಲ್ಲಿ ನದಿಯಲ್ಲಿ ತೇಲುತ್ತಾ ಹೋಗಿ, ಆಗಸದಲ್ಲಿ ಹಾರುವ ವಿಮಾನ ರೆಡಿ ಮಾಡಿದ್ದಾರೆ. ಸದ್ಯ ಪೈಲೆಟ್ ಮಾತ್ರ ಕುಳಿತು ಹಾರುವ ವಿಮಾನ ರೆಡಿಯಾಗಿದ್ದು, ಏರೋನಾಟಿಕಲ್ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್ ಕ್ಲಾಸ್ ಕೊಡುವ ಜೊತೆ ಜೊತೆಗೆ ಮುಂದೆ ಏಳು ಜನ ಹಾರುವ ತಾಕತ್ತಿನ ವಿಮಾನ ತಯಾರು ಮಾಡುವ ಕನಸು ಇಟ್ಟುಕೊಂಡಿದ್ದಾರೆ.

ರಿಮೋಟ್ ಕಂಟ್ರೋಲ್ ವಿಮಾನ, ಏರೋನಾಟಿಕಲ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಮಾಡಿಕೊಡುವ ಪುಷ್ಪರಾಜ್ 190 ಕೆಜಿ ಭಾರ ಹೊತ್ತೊಯ್ಯುವ ವಿಮಾನ ತಯಾರಿಸಿದ್ದಾರೆ. ಏರ್ ಕ್ರಾಫ್ಟ್ ಗ್ರೇಡ್ ಅಲುಮೀನಿಯಂ, ಸ್ಟೀಲ್ ನಿಂತ ಗಟ್ಟಿಯಾಗಿರುವ ಸ್ಪೆಷಲ್ ನೈಲಾನ್ ಬ್ರೈಡೆಡ್ ರೋಪ್, ನೈಲಾನ್ ಫ್ಯಾಬ್ರಿಕ್ ಕ್ಲೋತ್, 33 ಎಚ್ ಪಿ ಪವರ್ ಇರುವ 200 ಸಿಸಿ ಸಿಮೊನಿನಿ ಇಟಾಲಿಯನ್ ಎಂಜಿನ್, 53 ಇಂಚ್‍ನ ಮರದ ಪ್ರೊಫೆಲ್ಲರ್, ಬಳಸಿ ವಿಮಾನ ತಯಾರಿಸಿದ್ದಾರೆ. ಸ್ಪೀಡ್ ಪೆಟ್ರೋಲ್ ಬಳಸಿ ನದಿಯಲ್ಲಿ ಈ ವಿಮಾನ ವೇಗವಾಗಿ ಓಡಿ ಆಗಸದಲ್ಲಿ ಹಾರುತ್ತದೆ.

ಈ ವಿಮಾನಕ್ಕೆ ಸುಮಾರು ಏಳು ಲಕ್ಷ ರುಪಾಯಿ ಖರ್ಚಾಗಿದೆ. ಮನೆಯ ತೋಟದಲ್ಲೇ ವಿದ್ಯಾರ್ಥಿಗಳ ಜೊತೆಗೂಡಿ ಮೈಕ್ರೋ ಲೈಟ್ ಸೀ ಪ್ಲೈನ್ ರೆಡಿಯಾಗಿದೆ. ಗೆಳೆಯರ ಸಂಬಂಧಿಕರೆ ಸಹಾಯಧನ ನೀಡಿ ಈ ವೆಚ್ಚ ಭರಿಸಿದ್ದಾರೆ. ಈ ನಡುವೆ ಈ ಟೀಂ ನಮ್ಮನ್ನಾಳುವ ಸರ್ಕಾರಗಳಿಗೊಂದು ಮನವಿ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಡಿಕುದ್ರುವಿನಲ್ಲಿ ಒಂದು ವರ್ಕ್ ಶಾಪ್ ವ್ಯವಸ್ಥೆ ಮಾಡಿಕೊಡಬೇಕು. ಸರ್ಕಾರ ಈ ಶೋಧನೆಗೆ, ಯುವಕರ ತಂಡದ ಸಾಧನೆಗೆ ಬೆನ್ನೆಲುವಾಗಿ ನಿಲ್ಲಬೇಕು. ಅನ್ವೇಷಣೆಗೆ ಬೇಕಾದ ಕೆಲ ಟೂಲ್ಸ್ ಗಳಿಗೆ ಸಹಾಯಧನ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಪ್ರವಾಸೋದ್ಯಮ, ನೆರೆ ಸಂದರ್ಭ ಸಾರ್ವಜನಿಕ ರಕ್ಷಣೆ, ದೇಶದ ರಕ್ಷಣೆಗೆ ಸೀ ಪ್ಲೈನ್ ಬಳಕೆಯಾಗಲಿದೆ. ಇಷ್ಟೆಲ್ಲಾ ಮಾಡಬೇಕಾದರೆ ಸರಕಾರ ಆರ್ಥಿಕ ಶಕ್ತಿ ನೀಡಿದರೆ ಆತ್ಮ ನಿರ್ಭರದ ಕನಸಿಗೆ ಒಂದು ಅರ್ಥ ಬರುತ್ತದೆ. ಇಂಡಿಯಾದಲ್ಲೇ ನೀರಿಂದ ನೀರಿಗೆ ಹಾರುವ ವಿಮಾನ ಯಶಸ್ವಿಯಾಗಿ ಸಿದ್ಧವಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *