ಉಡುಪಿಯಲ್ಲಿ ವರ್ಷಧಾರೆ- ಪದವಿ ಪರೀಕ್ಷೆ ಮುಂದೂಡಿಕೆ, ಮಾಳ ಘಾಟ್ ಬಂದ್

Public TV
2 Min Read

– ಪುತ್ತಿಗೆ ವಿದ್ಯಾಪೀಠಕ್ಕೆ ನುಗ್ಗಿದ ನೀರು, ಗೋಶಾಲೆ ಜಲಾವೃತ

ಉಡುಪಿ: ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಎಲ್ಲಾ ಹೊಳೆಗಳು, ನದಿಗಳು ತುಂಬಿ ಹರಿಯುತ್ತಿದ್ದು, ಜನವಸತಿ ಪ್ರದೇಶಗಳಲ್ಲಿ ಜಲದಿಗ್ಬಂಧನವಾಗಿದೆ. ಹೀಗಾಗಿ ನಾಳೆ ಅಂದರೆ ಸೋಮವಾರ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಇತ್ತ ಮಾಳ ಫಾಟ್ ಬಂದ್ ಆಗಿದೆ.

ಉಡುಪಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕಾರ್ಕಳ ತಾಲೂಕಿನ ಮಾಳಘಾಟಿಯಲ್ಲಿ ಗುಡ್ಡ ಕುಸಿತವಾಗಿದೆ. ಕಾರ್ಕಳ ಎಸ್‍ಕೆ ಬಾರ್ಡರ್ ತಿರುವಿನಲ್ಲಿ ಕುಡ್ಡ ಗುಸಿತವಾಗಿದ್ದು, ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮರಗಳು ಉರುಳಿ ಬಿದ್ದಿದ್ದವು. ನಂತರ ಸಿಬ್ಬಂದಿ ಮರಗಳನ್ನು ಕಡಿದು ತೆರವು ಮಾಡಿದ್ದಾರೆ. ಆದರೆ ಮರಗಳನ್ನು ತೆರವುಗೊಳಿಸಿದ ಕೆಲವೇ ಹೊತ್ತಿನಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ ಸುಗಮ ಸಂಚಾರಕ್ಕೆ ಸ್ಥಳೀಯರು ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಸುಮಾರು ಮೂರು ಗಂಟೆಯಿಂದ ಮಾಳ ಘಾಟಿ ಸಂಪೂರ್ಣ ಸ್ತಬ್ಧವಾಗಿದೆ.

ಜಿಲ್ಲೆಯ ಹಲವು ಭಾಗಗಳು ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪದವಿ ಅಂತಿಮ ವರ್ಷದ ಪರೀಕ್ಷೆಯನ್ನು ಮುಂದೂಡಿದೆ. ನಾಳೆ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಈಗಾಗಲೇ ಕೊರೊನಾ ಕಾರಣದಿಂದಾಗಿ ಪರೀಕ್ಷೆಗೆ ಆರು ತಿಂಗಳು ವಿಳಂಬವಾಗಿತ್ತು. ಇದೀಗ ಮಳೆಯಿಂದಾಗಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬರಲು ಅಡಚಣೆ ಆಗಬಹುದು ಎಂಬ ಕಾರಣದಿಂದ ಮುಂದೂಡಿಕೆ ಮಾಡಲಾಗಿದೆ.

ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿಯಲ್ಲಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಗಡಿಭಾಗದಲ್ಲಿರುವ ಶಾಂಭವಿ ನದಿ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುಂದಿನ 24 ಗಂಟೆ ವಿಪರೀತ ಮಳೆ ಬೀಳುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ಅಗ್ನಿಶಾಮಕ ದಳ ನೆರೆ ಪೀಡಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎನ್‌ಡಿಆರ್‌ಎಫ್ ತಂಡವನ್ನು ಕರೆಸಿಕೊಳ್ಳಲಾತ್ತಿದೆ.

ಹಿರಿಯಡ್ಕ ಸಮೀಪ ಸುವರ್ಣ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿ ನಿರ್ಮಿಸಲಾದ ವಿದ್ಯುತ್ ಉತ್ಪಾದನಾ ಘಟಕದ ಸುತ್ತಮುತ್ತ ಭಾರೀ ಪ್ರಮಾಣದ ಮಳೆ ನೀರು ಹರಿಯುತ್ತಿದೆ. ಉಡುಪಿ ಕುಡಿಯುವ ನೀರಿನ ಯೋಜನೆ ಸ್ವರ್ಣ ನದಿಯ ಬಜೆ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲ ಗದ್ದೆ ತೋಟಗಳಿಗೆ ನೀರು ನುಗ್ಗಿದೆ. ರಾತ್ರೋರಾತ್ರಿ ಸುರಿದ ಭಾರೀ ಮಳೆಗೆ ಉದ್ಯಾವರ ಗ್ರಾಮದ ಪಿತ್ರೋಡಿಯ ಕೆಲ ಪ್ರದೇಶ ಜಲಾವೃತವಾಗಿದೆ. ಗಜನೆ, ಪಟ್ನಾ ಪರಿಸರದಲ್ಲಿ ಕೃತಕ ನೆರೆ ಉಂಟಾಗಿದ್ದು, ಅಪಾಯದ ಅಂಚಿನಲ್ಲಿದ್ದ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎಲ್ಲಾ ಅಗತ್ಯ ಪೂರೈಕೆಗಳನ್ನು ಉಡುಪಿ ಜಿಲ್ಲೆಗೆ ಮಾಡುವಂತೆ ಮನವಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎನ್‌ಡಿಆರ್‌ಎಫ್ ತಂಡ ಉಡುಪಿಗೆ ಹೊರಟು ಕಾರ್ಯಾಚರಣೆ ನಡೆಸುತ್ತಿದೆ. ಹೆಲ್ಪ್ ಲೈನ್ ನಂಬರ್‌ಗಳನ್ನು ಸಹ ತೆರೆಯಲಾಗಿದ್ದು, ಜಿಲ್ಲಾಡಳಿತ ಜನರ ರಕ್ಷಣೆಗೆ ಬದ್ಧವಾಗಿದೆ ಎಂದರು.

ಹಿರಿಯಡ್ಕ ಸಮೀಪದ ಪುತ್ತಿಗೆ ವಿದ್ಯಾಪೀಠಕ್ಕೆ ನೀರು ನುಗ್ಗಿದ್ದು, ಮಠದ ಗೋಶಾಲೆ ಜಲಾವೃತವಾಗಿದೆ. ತಕ್ಷಣ ಸ್ಥಳೀಯರ ನೆರವಿನೊಂದಿಗೆ ಗೋವುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *