ಉಡುಪಿಯಲ್ಲಿ ವರುಣನ ಅಬ್ಬರ – ಮನೆಗಳು ಮುಳುಗಡೆ, ರಸ್ತೆ ಸಂಚಾರ ಸ್ತಬ್ಧ

Public TV
2 Min Read

ಉಡುಪಿ: ರಾಜ್ಯದಲ್ಲಿ ಮುಂದಿನ ಎರಡು ದಿನ ಮಹಾ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಕಟ್ಟೆಚ್ಚರಿಕೆ ನೀಡಿದೆ. ಇತ್ತ ಉಡುಪಿಯಲ್ಲಿ ಶನಿವಾರ ಮಧ್ಯಾಹ್ನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನದಿಪಾತ್ರದ ಊರುಗಳಿಗೆ ನೀರು ನುಗ್ಗಿದೆ.

ಉಡುಪಿ ನಗರದ ಕೆಲಭಾಗ ಕೂಡ ಮುಳುಗಡೆಯಾಗಿದೆ. ಕಲ್ಸಂಕ, ಬೈಲಕೆರೆ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಬಾರಿ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತಡೆಯಾಗಿದೆ. ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸ್ತಬ್ಧವಾಗಿದೆ. ಹಿರಿಯಡ್ಕದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉಡುಪಿ ಶ್ರೀಕೃಷ್ಣ ಮಠದ ಸಮೀಪ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವು ಮುಳುಗಡೆಯಾಗಿದೆ. ಇಂದ್ರಾಣಿ ನದಿಯ ಅಕ್ಕ ಪಕ್ಕದ ಪ್ರದೇಶಗಳು ಜಲಾವೃತಗೊಂಡಿವೆ. ಬೈಲಕೆರೆ ಪರಿಸರದಲ್ಲಿ ನೀರಿನ ಮಟ್ಟ ಏರಿದ್ದು, ಹಲವಾರು ಮನೆಗಳಿಗೆ ನೀರು ಹೊಕ್ಕಿರುವ ಘಟನೆ ನಡೆದಿದೆ. ಮನೆ ಅಂಗಳದಲ್ಲಿ ನಿಲುಗಡೆಗೊಳಿಸಿರುವ ವಾಹನಗಳು ಮುಳುಗಡೆಯಾಗಿದೆ.

ಮಲ್ಪೆ ಕಡಲತೀರದಲ್ಲಿ ಇಂದ್ರಾಣಿ ನದಿ ಉಕ್ಕಿ ಹರಿದಿದ್ದು, ಆಸುಪಾಸಿನಲ್ಲಿ ಜಲ ದಿಗ್ಭಬಂಧನವಾಗಿದೆ. ಗದ್ದೆಗಳು ಜಲಾವೃತಗೊಂಡಿದೆ. ಇನ್ನೂ ಬ್ರಹ್ಮಾವರ ತಾಲೂಕಿನ ನೀಲಾವರ, ಮಟಪಾಡಿ ಗ್ರಾಮಗಳಲ್ಲಿ ತೋಟಗಳಿಗೆ ನೀರು ನುಗ್ಗಿದೆ. ತಗ್ಗುಪ್ರದೇಶದ ಜನಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ನೆರೆಯ ಮಟ್ಟ ಕಡಿಮೆಯಾಗುತ್ತಿಲ್ಲ. ಅರಬ್ಬಿ ಸಮುದ್ರದಲ್ಲಿ ವಿಪರೀತವಾಗಿ ಗಾಳಿ ಇರುವುದರಿಂದ ನದಿಯ ನೀರು ಸರಾಗವಾಗಿ ಸಾಗರಕ್ಕೆ ಹರಿಯುತ್ತಿಲ್ಲ.

ಇಂದು ಮತ್ತು ನಾಳೆ ಕರಾವಳಿ ಭಾಗ, ಕೊಡಗು, ಚಿಕ್ಕಮಗಳೂರು, ಬಳ್ಳಾರಿ ಮತ್ತು ಧಾರವಾಡ ಭಾಗದಲ್ಲಿ ಭಾರೀ ವರ್ಷಧಾರೆ ಆಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಅತ್ತ ಉತ್ತರ ಕರ್ನಾಟಕದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ರಾಯಚೂರಿನಲ್ಲಿ ಕಳೆದ ಮೂರು ದಿನಗಳಿಂದಲೂ ರಾತ್ರಿ ವೇಳೆ ಭಾರೀ ಮಳೆಯಾಗುತ್ತಿದ್ದು, ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ ಕಡಿತವಾಗಿದೆ.

ಜೆಸ್ಕಾಂ ಉಗ್ರಾಣ, ಕಚೇರಿಗೆ ರಾಜಕಾಲುವೆ ನೀರು ನುಗ್ಗಿದೆ. ರಾಯಚೂರಿನ ಸೀಯತಲಾಬ್, ಸುಖಾಣಿ ಕಾಲೋನಿ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ದಾರೆ. ಯಾದಗಿರಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಕಂಗಳೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ದೇವಸ್ಥಾನದ ಮೇಲೆ ಐದಡಿ ನೀರು ಹರಿಯುತ್ತಿದೆ.

ಯಾದಗಿರಿ ನಗರದತ್ತಲೂ ನೀರು ಆವರಿಸುತ್ತಿದೆ. ಕೊಡಗು ಜಿಲ್ಲೆಯಾದ್ಯಂತ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದೆ. ಉಡುಪಿ-ಕೊಡಗಿನಲ್ಲಿ ಸೆಪ್ಟೆಂಬರ್ 22ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *