ಉಗ್ರರಿರುವ ಸ್ಥಳಕ್ಕೆ ಪೋಷಕರ ಕೊಂಡೊಯ್ದು ಮನವೊಲಿಕೆ- ಇಬ್ಬರು ಶರಣಾಗತ

Public TV
3 Min Read

– ಇತ್ತೀಚೆಗೆ ಸಂಘಟನೆ ಸೇರಿಕೊಂಡಿದ್ದ ಉಗ್ರರು

ಶ್ರೀನಗರ: ಭಾರತೀಯ ಸೇನೆ ಮತ್ತೊಂದು ಹೆಮ್ಮೆಯ ಕೆಲಸ ಮಾಡಿದ್ದು, ಇತ್ತೀಚೆಗಷ್ಟೇ ಉಗ್ರ ಸಂಘಟನೆ ಸೇರಿದ್ದ ಇಬ್ಬರನ್ನು ಮನವೊಲಿಸಿದ್ದಾರೆ. ಉಗ್ರರು ಅಡಗಿರುವ ಸ್ಥಳವನ್ನು ಸುತ್ತುವರಿದು, ಪೋಷಕರನ್ನು ಕೊಂಡೊಯ್ದು ಮನವೊಲಿಸಿದ್ದು, ಈ ವೇಳೆ ಇಬ್ಬರೂ ಶರಣಾಗಿದ್ದಾರೆ.

ಈ ಕುರಿತು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಪೋಷಕರು ಮನವಿ ಮಾಡಿದ ಬಳಿಕ ಇಬ್ಬರು ಉಗ್ರರು ಶರಣಾಗತರಾಗಿದ್ದು, ತಮ್ಮ ಶಸ್ತ್ರಾಸ್ತ್ರಗಳನ್ನು ಕಳಚಿ ಪೋಷಕರ ಮುಂದೆ ತಲೆಬಾಗಿದ್ದಾರೆ. ಭಾರತೀಯ ಸೇನೆಯ ಅಧಿಕಾರಿಗಳು ಪೋಷಕರನ್ನು ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಬಳಿಕ ಇತ್ತೀಚೆಗಷ್ಟೇ ಉಗ್ರ ಸಂಘಟನೆ ಸೇರಿರುವ ಅವರ ಮಕ್ಕಳನ್ನು ಮನವೊಲಿಸಲು ಹೇಳಿದ್ದಾರೆ. ಪೋಷಕರ ಮನವಿ ಬಳಿಕ ಇಬ್ಬರು ತಮ್ಮ ಶಸ್ತ್ರಗಳನ್ನು ತ್ಯಾಗ ಮಾಡಿ ಶರಣಾಗತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಶರಣಾಗಿದ್ದು ಹೇಗೆ?
ಉತ್ತರ ಕಾಶ್ಮೀರದ ಸೊಪೋರ್‍ನ ಶಲ್ಪೋರಾ ತುಜಾರ್ ಶರೀಫ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಜಮ್ಮು ಕಾಶ್ಮೀರ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಬಳಿಕ ಭದ್ರತಾ ಸಿಬ್ಬಂದಿ ಜಂಟಿಯಾಗಿ ಪ್ರದೇಶವನ್ನು ಸುತ್ತುವರಿದಿದ್ದು, ಹುಡುಕಾಟದ ಕಾರ್ಯಾಚರಣೆ ನಡೆಸಿದ್ದಾರೆ.

ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಪೊಲೀಸರು ಅನೌನ್ಸ್ ಮಾಡಿದ್ದಾರೆ. ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಹುಡುಕಾಟದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಶರಣಾಗತರಾದವರಿಗೆ ಒಂದು ಅವಕಾಶ ಕೊಡಲು ನಿರ್ಧರಿಸಲಾಗಿದೆ. ಹೀಗಾಗಿ ನಿಮ್ಮ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆ ತಂದಿದ್ದೇವೆ ಎಂದು ಹೇಳಿದ್ದಾರೆ. ಬಳಿಕ ಉಗ್ರರು ಶರಣಾಗಿದ್ದಾರೆ.

ಭದ್ರತಾ ಪಡೆಯ ಅದ್ಭುತ ಪ್ರಯತ್ನದಿಂದಾಗಿ ಕುಟುಂಬಸ್ಥರು ಹಲವು ಬಾರಿ ಮನವಿ ಮಾಡಿ ಗೋಗರೆದರು. ಪೊಲೀಸರು ಹಾಗೂ ಸೇನೆಯ ಮುಂದೆ ಉಗ್ರರಾದ ಅಬಿದ್ ಮುಷ್ತಕ್ ದಾರ್ ಹಾಗೂ ಮಹ್ರಜ್-ಯು-ದಿನ್ ದಾರ್ ಶರಣಾದರು. ಇಬ್ಬರೂ ಸೊಪೋರ್‍ನ ಮೊಬಾಯಿ ಪ್ರದೇಶದ ವಡೂದರಾ ಪಾಯೀನ್ ನವರಾಗಿದ್ದಾರೆ. ಇದನ್ನೂ ಓದಿ: ಎನ್‌ಕೌಂಟರ್‌ ಭಯ – ಕೈ ಎತ್ತಿ ಶರಣಾದ ಉಗ್ರ, ಸೈನಿಕರ ಕಾಲಿಗೆ ಅಡ್ಡ ಬಿದ್ದ ತಂದೆ

ಶರಣಾದ ಉಗ್ರರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಪ್ರತಿ ಬಾರಿಯ ಎನ್‍ಕೌಂಟರ್ ವೇಳೆ ನಾವು ಶರಣಾಗಲು ಅವಕಾಶ ನೀಡುತ್ತೇವೆ. ಅವರು ನಮ್ಮ ಜನರೇ ಆಗಿದ್ದಾರೆ ಎಂದು ಕಾಶ್ಮೀರದ ಇನ್‍ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ತಿಳಿಸಿದ್ದಾರೆ.

ಈ ಹಿಂದೆ ಸಹ ಉಗ್ರನೊಬ್ಬ ಶರಣಾದ ವಿಡಿಯೋವನ್ನು ಸೇನೆ ಹಂಚಿಕೊಂಡಿತ್ತು. ಜಹಂಗೀರ್ ಭಟ್ ಸಹ ಹೊಸದಾಗಿ ಉಗ್ರ ಸಂಘಟನೆ ಸೇರಿದವನಾಗಿದ್ದ. ಆತನಿಂದ ಎಕೆ-47 ಬಂದೂಕು ವಶಪಡಿಸಿಕೊಳ್ಳಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *