ಉಗ್ರರಿಗೆ ವಿತರಣೆ – ಪಾಕ್ ಶಸ್ತ್ರಸಜ್ಜಿತ ದೊಡ್ಡ ಡ್ರೋನ್ ಹೊಡೆದುರುಳಿಸಿದ ಸೇನೆ

Public TV
2 Min Read

ಶ್ರೀನಗರ: ಉಗ್ರರಿಗೆ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್‍ನ್ನು ಬಿಎಸ್‍ಎಫ್ ಯೋಧರು ಹೊಡೆದುರುಳಿಸಿದ್ದಾರೆ.

ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಕಥುವಾದ ಹಿರಾನಗರ ಸೆಕ್ಟರ್ ಬಳಿ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಡ್ರೋನ್ ಪತ್ತೆಯಾಗಿದ್ದು, ಕೂಡಲೇ ಯೋಧರು ಹೊಡೆದುರಳಿಸಿದ್ದಾರೆ. ಡ್ರೋನ್‍ನಲ್ಲಿದ್ದ ಅಮರಿಕ ನಿರ್ಮಿತ ಎಂ4 ಬಂದೂಕು, ಮದ್ದುಗುಂಡುಗಳು ಹಾಗೂ 7 ಗ್ರೆನೇಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನಿ ಸೇನೆ ಕೇಂದ್ರಾಡಳಿತ ಪ್ರದೇಶದಲ್ಲಿರುವ ಉಗ್ರರಿಗೆ ಆಯುಧವನ್ನು ತಲುಪಿಸುವ ಮತ್ತೊಂದು ಪ್ರಯತ್ನವನ್ನು ಮಾಡಿದೆ. ಈ ಆಯುಧಗಳನ್ನು ಉಗ್ರ ಅಲಿ ಭಾಯ್‍ಗೆ ಕಳುಹಿಸಲಾಗಿತ್ತು. ವಸ್ತುಗಳ ಮೇಲೆ ಆತನ ಹೆಸರನ್ನು ಬರೆಯಲಾಗಿತ್ತು. ಡ್ರೋನ್ ಸುಮಾರು 8 ಅಡಿ ಅಗಲವಿದ್ದು, ಹಿರಾನಗರದ ಅಂತರಾಷ್ಟ್ರೀಯ ಗಡಿಯಿಂದ 250 ಮೀಟರ್ ಒಳಗೆ ಕಾಣಿಸಿಕೊಂಡಿತ್ತು. 8-9 ಸುತ್ತು ಗುಂಡು ಹೊಡೆದು ಹೊಡೆದುರುಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಬಿಎಸ್‍ಎಫ್ ಅಧಿಕಾರಿಗಳು ಮಾಹಿತಿ ನೀಡಿ, ಕಥುವಾ ಅಂತರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನಿ ಡ್ರೋನ್ ಹೊಡೆದುರುಳಿಸಿದ್ದೇವೆ. ಡ್ರೋನ್‍ನಲ್ಲಿ ಅಮೆರಿಕ ನಿರ್ಮಿತ ಎಂ4 ಕ್ಯಾರ್ಬಿನ್ ಮಷಿನ್, ಎರಡು ಮ್ಯಾಗಜೈನ್‍ಗಳು, 60 ಆರ್‍ಡಿಎಸ್(ರ್ಯಾಪಿಡ್ ಡಿಪ್ಲಾಯ್‍ಮೆಂಟ್ ಸಿಸ್ಟಮ್) ಹಾಗೂ 7 ಚೀನಾ ನಿರ್ಮಿತ ಗ್ರೆನೇಡ್‍ಗಳು ಪತ್ತೆಯಾಗಿವೆ. ಡ್ರೋನ್ ಮೂಲಕ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಪಾಕಿಸ್ತಾನದಿಂದ ಭಾರತದ ಕಡೆಗೆ ಸಾಗಿಸುವ ಕುರಿತು ಬಿಎಸ್‍ಎಫ್ ಇಂಟಲಿಜೆನ್ಸ್ ಶಾಖೆ ಮಾಹಿತಿ ಕಲೆ ಹಾಕುತ್ತಿದೆ. ಸೈನಿಕರಿಗೂ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಜಮ್ಮು ಪ್ರದೇಶದಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಾವನ್ನಪ್ಪಿದ ವೇಳೆ ಇದೇ ರೀತಿಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದು ಪಾಕಿಸ್ತಾನದ್ದೇ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *