ಈ ಸಮಯದಲ್ಲಿ ರಾಜಕೀಯ ಬೇಳೆ ಬೇಯಿಸಲು ಹೋಗೋದು ಸರಿಯಲ್ಲ: ಗೋಪಾಲಸ್ವಾಮಿ

Public TV
2 Min Read

– ರೇವಣ್ಣನ ಮೇಲೆ ಎಂಎಲ್‍ಸಿ ಗೋಪಾಲಸ್ವಾಮಿ ಆಕ್ರೋಶ

ಹಾಸನ: ಜಿಲ್ಲೆಯಲ್ಲಿ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಕೊರೊನಾ ವಿರುದ್ಧ ಹೋರಾಡಲು ಬಳಸಬಹುದಾಗಿದ್ದ ಸುಮಾರು 112 ಕೋಟಿ ಹಣ ಮಾಜಿ ಸಚಿವ ರೇವಣ್ಣ ಅವರಿಂದ ಬಳಕೆಯಾಗದೆ ವಾಪಸ್ಸಾಗುವ ಪರಿಸ್ಥಿತಿ ಬಂದಿದೆ ಎಂದು ಎಂಎಲ್‍ಸಿ ಗೋಪಾಲಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

15ನೇ ಹಣಕಾಸಿನಲ್ಲಿ ಜಿಲ್ಲಾಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಮೂರಕ್ಕೂ ಸೇರಿ ಹಾಸನ ಜಿಲ್ಲೆಗೆ ಸುಮಾರು 112 ಕೋಟಿ ಹಣ ಬಂದಿದೆ. ಈ ಹಣವನ್ನು ಅಭಿವೃದ್ಧಿ ಕಾರ್ಯದ ಜೊತೆಗೆ ಕೊರೊನಾ ವಿರುದ್ಧ ಹೋರಾಟಕ್ಕೆ ಬೇಕಾದ ವೈದ್ಯಕೀಯ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸಲು ಬಳಸಬಹುದಾಗಿದೆ ಎಂದು ಗೋಪಾಲಸ್ವಾಮಿ ಹೇಳಿದ್ದಾರೆ.

ಈ ಹಣ ಬಳಸಬೇಕು ಅಂದರೆ ಮೇ 31ರ ಒಳಗೆ ಜಿಲ್ಲಾ ಪಂಚಾಯ್ತಿ ಸಭೆ ಕರೆದು ಅನುಮೋದನೆ ಮಾಡಿ ಎಂಬ ನಿಯಮವಿದೆ. ಆದ್ದರಿಂದ ಕೊರೊನಾ ಹಿನ್ನೆಲೆಯಲ್ಲಿ ಹಣ ಬಳಸುವ ಸಂಬಂಧ ನಿನ್ನೆ ಜಿಲ್ಲಾ ಪಂಚಾಯ್ತಿಯಲ್ಲಿ, ಅಧ್ಯಕ್ಷೆ ಶ್ವೇತಾ ದೇವರಾಜ್ ನೇತೃತ್ವದಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು. ಜಿಲ್ಲಾ ಪಂಚಾಯ್ತಿಯಲ್ಲಿ ಜೆಡಿಎಸ್‍ನ 23, ಕಾಂಗ್ರೆಸ್ಸಿನ 16, ಬಿಜೆಪಿಯ ಒಬ್ಬರು ಸದಸ್ಯರಿದ್ದು, ನಿನ್ನೆ ಕರೆದಿದ್ದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗೆ ಜೆಡಿಎಸ್‍ನ 23 ಸದಸ್ಯರು ಸಾಮೂಹಿಕವಾಗಿ ಗೈರಾಗಿದ್ದರು. ಇದರಿಂದ ಸಭೆಯಲ್ಲಿ ಕೋರಂ ಕೊರತೆಯಾಗಿ 112 ಕೋಟಿ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಅನುಮೋದನೆಯಾಗಿಲ್ಲ. ಇದಕ್ಕೆಲ್ಲ ಮಾಜಿ ಸಚಿವ ರೇವಣ್ಣ ನೇರ ಹೊಣೆ ಎಂದು ಎಂಎಲ್‍ಸಿ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಗಂಭೀರ ಆರೋಪ ಮಾಡಿದ್ದಾರೆ.

ನಮ್ಮ ವೈಯಕ್ತಿಕ ಕೆಲಸಕ್ಕೆ ಕೇಳಲು ಜಿಲ್ಲಾ ಪಂಚಾಯ್ತಿ ಸಭೆ ಕರೆದಿಲ್ಲ. ಪಿಪಿಇ ಕಿಟ್, ವೆಂಟಿಲೇಟರ್ ಸಾರ್ಟೆಜ್ ಇದೆ. 112 ಕೋಟಿಯಲ್ಲಿ ನಾವು ಇದನ್ನೆಲ್ಲ ತರಲು ಒಂದಷ್ಟು ಹಣ ಬಳಬಹುದು. ನಮ್ಮ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ರಾಜಕೀಯ ಬೇಳೆ ಬೇಯಿಸಲು ಹೋಗೋದು ಸರಿಯಲ್ಲ. ಒಂದು ವೇಳೆ ಹಣ ವಾಪಸ್ ಹೋದರೆ ರೇವಣ್ಣ ಅವರು ನೇರವಾಗಿ ಇದರ ಜವಾಬ್ದಾರಿ ಹೊರಬೇಕಾಗುತ್ತೆ. ಇದೇ ತಿಂಗಳು 29ರಂದು ಮತ್ತೆ ಸಭೆ ಕರೆದಿದ್ದೇವೆ. ದಯಮಾಡಿ ಬನ್ನಿ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *