ಈ ಐದು ಎಡವಟ್ಟಿನಿಂದ ದುಬೆ ಎನ್‌ಕೌಂಟರ್‌ನಲ್ಲಿ ಸಿಕ್ಕಿಬೀಳ್ತಾರಾ ಪೊಲೀಸರು?

Public TV
2 Min Read

– ದುಬೆ ಎನ್‍ಕೌಂಟರ್ ಸುತ್ತ ಅನುಮಾನಗಳ ಹುತ್ತ

ಲಕ್ನೋ: ಇಂದು ಮುಂಜಾನೆ ಎನ್‍ಕೌಂಟರ್ ಆದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಈ ಎಲ್ಲದರ ನಡುವೆ ಪೊಲೀಸರು ನೀಡಿರುವ ಹೇಳಿಕೆಗಳು ಅನುಮಾನ ಮೂಡುವಂತಿದೆ.

ಪೊಲೀಸರು ಎನ್‍ಕೌಂಟರ್ ಗೆ ನೀಡಿರುವ ಕೆಲ ಕಾರಣಗಳು ಅನುಮಾನ ಮೂಡಿಸುತ್ತಿವೆ. ಈಗ ಪೊಲೀಸರು ಕೊಟ್ಟ ಕಾರಣಗಳೇ ಈ ಪ್ರಕರಣದಲ್ಲಿ ಪೊಲೀಸರನ್ನು ಸಿಕ್ಕಿಹಾಕಿಕೊಳ್ಳವಂತೆ ಮಾಡುತ್ತಿದೆ ಎಂದು ಹೇಳಲಾಗಿದೆ. ಪೊಲೀಸರು ಕೊಟ್ಟ ಐದು ಕಾರಣಗಳನ್ನು ನೋಡಿದರೆ, ಇದರಲ್ಲಿ ಸಂಶಯಾಸ್ಪದ ವಿಚಾರಗಳೇ ಜಾಸ್ತಿ ಇವೆ.

ಎನ್‍ಕೌಂಟರ್ ಗೆ ಮೊದಲ ಕಾರಣ ಕೊಟ್ಟಿರುವ ಪೊಲೀಸರು, ನಮ್ಮ ಬೆಂಗಾವಲು ವಾಹನ ಪಲ್ಟಿಯಾದ ನಂತರ ದುಬೆಯನ್ನು ನಾವು ಕಾರಿನಿಂದ ಹೊರ ಎಳೆದವು. ಆಗ ಆತ ನಮ್ಮ ಪೊಲೀಸರಿಗೆ ಗುಂಡು ಹಾರಿಸಿ ಓಡಲು ಯತ್ನಿಸಿದನು. ಈ ವೇಳೆ ನಾವು ಶೂಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಓಡುತ್ತಿದ್ದ ದುಬೆಯ ಎದೆಗೆ ಹಿಂಬದಿಯಿಂದ ಪೊಲೀಸರು ಹೇಗೆ ನಿಖರವಾಗಿ ಗುಂಡು ಹಾರಿಸಿದರು ಎಂಬ ಪ್ರಶ್ನೆ ಈಗ ಮೂಡಿದೆ.

ದುಬೆ ಕೃಷಿ ಹೊಲದಲ್ಲಿ ತಪ್ಪಿಸಿಕೊಂಡು ಓಡುವಾಗ ಗುಂಡು ಹೊಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಎನ್‍ಕೌಂಟರ್ ನಡೆದಿರುವುದು ನಿರ್ಜನ ಪ್ರದೇಶದಲ್ಲಿ ಜೊತೆಗೆ ಮುಂಜಾನೆಯಲ್ಲಿ. ಆಗ ಆತ ಓಡುತ್ತಿದ್ದ ಎಂದು ಹೇಳಿದ್ದಾರೆ. ವರದಿಯ ಪ್ರಕಾರ, ದುಬೆ ಬಲಗಾಲಿಗೆ ಕಬ್ಬಿಣ ರಾಡ್ ಅನ್ನು ಹಾಕಲಾಗಿದೆ. ಜೊತೆಗೆ ಆತ ಇತ್ತೀಚೆಗೆ ಕುಂಟುತ್ತಿದ್ದ ಎಂದು ಹೇಳಲಾಗಿದೆ. ಹೀಗಿರುವಾಗ ಆತ ಹೇಗೆ ಓಡಿಹೋಗುತ್ತಾನೆ ಎಂಬ ಅನುಮಾನ ಮೂಡಿದೆ.

ಇದರ ಜೊತೆಗೆ ಉತ್ತರ ಪ್ರದೇಶದ ಪೊಲೀಸರು, ದುಬೆ ನಮ್ಮ ಗಾಯಗೊಂಡ ಪೊಲೀಸರ ಬಳಿ ಬಂದೂಕುಗಳನ್ನು ಕಿತ್ತುಕೊಂಡು ಹಲ್ಲೆ ಮಾಡಿದ ಎಂದು ಹೇಳಿದ್ದಾರೆ. ಆದರೆ ನಿಯಮಗಳ ಪ್ರಕಾರ, ಯಾವುದೇ ಆರೋಪಿಯನ್ನು ಬೇರೆ ಕಡೆ ಸಾಗಿಸುವಾಗ ಆತನಿಗೆ ಕೈಕೋಳ ಹಾಕಬೇಕು. ಅದನ್ನು ಹಾಕಿದ್ದರೇ ಆತ ಹೇಗೆ ಬಂದೂಕನ್ನು ಕಿತ್ತುಕೊಂಡ? ಇಲ್ಲವೇ ಅದನ್ನು ಹಾಕಿರಲಿಲ್ಲ ಎಂದರೆ ಏಕೆ ಹಾಕಲಿಲ್ಲ ಎಂಬ ಪ್ರಶ್ನೆ ಎದ್ದಿದೆ.

ದುಬೆ ನಮ್ಮ ಬೆಂಗಾವಲು ವಾಹನ ಪಲ್ಟಿಯಾದ ಬಳಿಕ ಪರಾರಿಯಾಗಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವರದಿಯ ಪ್ರಕಾರ, ದುಬೆಯನ್ನು ಮಧ್ಯ ಪ್ರದೇಶದಿಂದ ಟಾಟಾ ಸಫಾರಿ ಕಾರಿನಲ್ಲಿ ಕರೆದೊಯ್ಯಲಾಗುತ್ತಿತ್ತು. ಆದರೆ ಉತ್ತರ ಪ್ರದೇಶದಲ್ಲಿ ಪಲ್ಟಿಯಾಗಿದ್ದು ಟಿಯೂವಿ-300 ಎಸ್‍ಯೂವಿ ಕಾರು. ಮಾರ್ಗ ಮಧ್ಯೆ ಕಾರು ಚೇಂಜ್ ಆಗಲು ಕಾರಣವೇನು ಎಂಬ ಅನುಮಾನ ಬಂದಿದೆ.

ಘಟನೆಯಲ್ಲಿ ಗಾಯಗೊಂಡ ಪೊಲೀಸರು ಆಸ್ಪತ್ರೆಗೆ ಬಂದಾಗ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು. ಆದರೆ ಮಧ್ಯಪ್ರದೇಶದಲ್ಲಿ ದುಬೆಯನ್ನು ವಶಕ್ಕೆ ಪಡೆದಾಗ ಅಲ್ಲಿ ಇದ್ದ ಸಿಸಿಟಿವಿ ದೃಶ್ಯದ ಪ್ರಕಾರ ಯಾವ ಪೊಲೀಸ್ ಕೂಡ ಸಮವಸ್ತ್ರ ಧರಿಸಿರಲಿಲ್ಲ. ಪೊಲೀಸರು ಮಾರ್ಗ ಮಧ್ಯೆ ಸಮವಸ್ತ್ರ ಧರಿಸಲು ಕಾರಣವೇನು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *