ಇವರದ್ದು ಅವರ ಬಳಿ, ಅವರದೆಲ್ಲ ಇವರ ಬಳಿ, ಫಲಿತಾಂಶ ಶೂನ್ಯ: ಯತ್ನಾಳ್

Public TV
1 Min Read

– ಬಿಎಸ್‍ವೈ, ಡಿಕೆಶಿ ನಡುವೆ ಒಳ ಒಪ್ಪಂದ

ವಿಜಯಪುರ: ಸಿಡಿ ಪ್ರಕರಣದಲ್ಲಿ ಇಬ್ಬರು ಪ್ರಬಲ ನಾಯಕರಿದ್ದಾರೆ. ಒಬ್ಬರದ್ದು ಮತ್ತೊಬ್ಬರ ಬಳಿಯಲ್ಲಿದೆ. ಒಬ್ಬರಿಗೊಬ್ಬರು ಬ್ಲ್ಯಾಕ್‍ಮೇಲ್ ಮಾಡಿಕೊಂಡಿದ್ದಾರೆ. ಹಾಗಾಗಿ ಈ ಪ್ರಕರಣದ ಫಲಿತಾಂಶ ಶೂನ್ಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ರಾಜಕೀಯ ಪ್ರಭಾವ ಹೆಚ್ಚಿರುವ ಕಾರಣ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಪೊಲೀಸರ ಕೈಗಳನ್ನ ಕಟ್ಟಿ ಹಾಕಿ ಇದೇ ಪ್ರಶ್ನೆ ಕೇಳಬೇಕೆಂಬ ಒತ್ತಡಗಳಿವೆ. ಸಿಡಿ ಪ್ರಕರಣದಲ್ಲಿ ಓರ್ವ ಕಾಂಗ್ರೆಸ್ ಮತ್ತು ಮತ್ತೋರ್ವ ಬಿಜೆಪಿಗ ಇರೋದು ನಿಜ. ಡಿ.ಕೆ.ಶಿವಕುಮಾರ್ ಹೆಸರು ಹೊರ ಬಂದಿದ್ದು, ಸಿಎಂ ಯಡಿಯೂರಪ್ಪ ಇರೋವರೆಗೂ ಮತ್ತೊಬ್ಬ ಬಿಜೆಪಿಗನ ಹೆಸರು ಬೆಳಕಿಗೆ ಬರಲ್ಲ. ಆ ಹೆಸರನ್ನ ಮುಚ್ಚಿ ಹಾಕುವ ಕೆಲಸವನ್ನ ಸಿಎಂ ಮಾಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.

ಇನ್ನುಳಿದ ಬಿಜೆಪಿ ನಾಯಕರೆಲ್ಲರೂ ಒಳ್ಳೆಯವರು. ಸಿಡಿ ಪ್ರಕರಣದಲ್ಲಿ ಸಿಎಂ ಕುಟುಂಬದವರೇ ಒಬ್ಬರಿದ್ದಾರೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಒಳ್ಳೆಯ ಬಾಂಧವ್ಯವಿದೆ. ನನ್ನ ವಿರುದ್ಧ ವಿಚಾರಣೆ ನಡೆಸಲು ಕಾರಣ ಇರಬೇಕು. ನನ್ನ ಮೇಲೆ ಭೂ ಹಗರಣದ ಕೇಸ್ ಇದೆಯಾ ಅಥವಾ ಭ್ರಷ್ಟಾಚಾರದ ಆರೋಪಗಳಿವೆಯಾ ಎಂದು ಪರೋಕ್ಷವಾಗಿ ಸಿಎಂ ವಿರುದ್ಧವೇ ವಾಗ್ದಾಳಿ ನಡೆಸಿದರು.

ಯಾವ ಶಾಸಕರು ನನ್ನ ವಿರುದ್ಧ ಸಹಿ ಮಾಡಿಲ್ಲ. ಮುಖ್ಯಮಂತ್ರಿಗಳಿಗೆ ಬದ್ಧವಾಗಿದ್ದೇನೆ ಅನ್ನೋದನ್ನ ತೋರಿಸಿಕೊಳ್ಳಲು ಶಾಸಕ ರೇಣುಕಾಚಾರ್ಯ ಈ ರೀತಿ ಊಹಾಪೋಹ ಸುದ್ದಿಗಳನ್ನ ಹರಿ ಬಿಡುತ್ತಿದ್ದಾರೆ. ಸಿಎಂ ಬದಲಾವಣೆ ಆಗೋದು ಖಚಿತ. ಮುಖ್ಯಮಂತ್ರಿಗಳ ಬದಲಾವಣೆ ಆಗದಿದ್ರೆ ಪಕ್ಷ ನಡೆಯಲ್ಲ. ಕೇಂದ್ರಕ್ಕೂ ಈಗಿರುವ ಸಿಎಂ ಸಾಕಾಗಿದ್ದಾರೆ. ಕೇಂದ್ರವೇ ಮುಖ್ಯಮಂತ್ರಿಯನ್ನ ಬದಲಿಸುತ್ತಾರೆ ಎಂದು ಭವಿಷ್ಯ ನುಡಿದರು.

Share This Article
Leave a Comment

Leave a Reply

Your email address will not be published. Required fields are marked *