ಇನ್‍ಸ್ಟಾಗ್ರಾಮ್‍ನಲ್ಲಿ ಪರಿಚಯವಾಗಿ ಲಕ್ಷಾಂತರ ರೂಪಾಯಿ ದೋಚಿದ ದುಷ್ಕರ್ಮಿಗಳು

Public TV
2 Min Read

– ಗಿಫ್ಟ್ ಕಳಿಸುವುದಾಗಿ ಹೇಳಿ ಹಣ ಸುಲಿಗೆ
– ಹಣ ಕಳೆದುಕೊಂಡಾಗಲೇ ಮೋಸ ಬಯಲು

ನವದೆಹಲಿ: ಇನ್‍ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಇಬ್ಬರು ಪುರುಷರು ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಆರೋಪಿಗಳನ್ನು ಜನಕ್‍ಪುರಿ ನಿವಾಸಿ ಅಮರ್‍ಜೀತ್ ಯಾದವ್ ಮತ್ತು ನೈಜೀರಿಯಾದ ಬೆಂಜೊಮಿನ್ ಎಕೆನೆ ಎಂದು ಗುರುತಿಸಲಾಗಿದೆ. ಇವರನ್ನು ಪೊಲೀಸರು ಈಗಾಗಲೇ ಬಂಧಿಸಿ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ನವದೆಹಲಿಯ ಪುಷ್ಪ್ ವಿಹಾರ್ನಲ್ಲಿ ನೆಲೆಸಿರುವ ಮಹಿಳೆ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಲೂಸಿ ಹ್ಯಾರಿ ಎಂಬ ವ್ಯಕ್ತಿಯ ಪರಿಚಯವಾಗಿದೆ. ಇಬ್ಬರ ನಡುವೆ ಸ್ನೇಹ ಬೆಳೆದಿದೆ. ನಂತರ ಮಹಿಳೆಯಲ್ಲಿ ನಂಬಿಕೆ ಗಳಿಸಿಕೊಂಡಿದ್ದಾನೆ. ಒಂದು ದಿನ ಮಹಿಳೆಗೆ ವಿದೇಶಿ ಕರೆನ್ಸಿಯ ಗಿಫ್ಟ್ ಕಳುಹಿಸಿದ್ದೇನೆ ಎಂದು ಹೇಳಿದ್ದಾನೆ. ನಂತರ ಮಹಿಳೆಗೆ ಕಸ್ಟಮ್ಸ್ ಅಧಿಕಾರಿಗಳು ಮತ್ತು ಅಬಕಾರಿ ಅಧಿಕಾರಿಗಳು ನಾವು ನಿಮ್ಮ ಪಾರ್ಸ್‍ಲ್ ತೆಗೆದುಕೊಳ್ಳಲು ಹಣವನ್ನು ಪಾವತಿಸ ಬೇಕು ಎಂದು ತಿಳಿಸಿದ್ದಾರೆ.

ನಂತರ ಮಹಿಳೆಯಿಂದ ಕಸ್ಟಮ್ಸ್ ಸುಂಕ, ಅಬಕಾರಿ ಸುಂಕ, ವಿದೇಶಿ ಕರೆನ್ಸಿ ಪರಿವರ್ತನೆ ಶುಲ್ಕಗಳು ಮತ್ತು ಲಂಚದ ನೆಪದಲ್ಲಿ ಸುಮಾರು 25,000 ರೂ., 91,500, 2,01,500 ಮತ್ತು 75,000 ರೂ. ಸುಲಿಗೆ ಮಾಡಿದ್ದಾರೆ. ನಂತರ ಅವರು ಇನ್ನೂ 3.75 ಲಕ್ಷ ರೂ.ಗಳನ್ನು ಕೇಳಿದ್ದಾರೆ. ಆದರೆ ಮಹಿಳೆ ಬಳಿ ಇರುವ ಹಣ ಖಾಲಿಯಾಗಿದೆ. ನಂತರ ಮಹಿಳೆಗೆ ತಾನು ಮೋಸ ಹೋಗಿದ್ದೇನೆ ಎಂದು ತಿಳಿದು ಸಾಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನಿಖೆಯ ಸಮಯದಲ್ಲಿ ಬ್ಯಾಂಕ್ ಖಾತೆಯು ನಾಗಾಲ್ಯಾಂಡ್‍ನ ದಿಮಾಪುರದಲ್ಲಿರುವ ಯೂನಿಯನ್ ಬ್ಯಾಂಕ್ ಆಗಿದೆ ಎಂದು ತಿಳಿದುಬಂದಿದೆ. ಖಾತೆಯ ವಿಳಾಸ ನಕಲಿ ಎಂದು ಕಂಡುಬಂದಿದೆ. ನಂತರ ನಾವು ನಕಲಿ ಖಾತೆಯ ವಿವರಗಳನ್ನು ಪಡೆಯಲು ನೋಟಿಸ್ ಕಳುಹಿಸಿದ್ದೇವೆ. ವಿವರಗಳನ್ನು ನೀಡುವಂತೆ ಬ್ಯಾಂಕುಗಳನ್ನು ಸಹ ಕೇಳಲಾಗಿದೆ ಎಂದು ಡಿಸಿಪಿ (ದಕ್ಷಿಣ) ಅತುಲ್ ಠಾಕೂರ್ ಹೇಳಿದರು.

ಆರೋಪಿ ಅಮರ್‍ಜೀತ್ ಈ ಹಿಂದೆ ಸಿಮ್ ಕಾರ್ಡ್ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದನು. ಕಳೆದ 6 ತಿಂಗಳುಗಳಿಂದ ಲಾಕ್‍ಡೌನ್ ಸಮಯದಲ್ಲಿ ನೈಜೀರಿಯಾದ ಪ್ರಜೆಯೊಂದಿಗೆ ಸಂಪರ್ಕ ಬೆಳೆಸಿದ್ದಾನೆ. ಸುಲಭವಾಗಿ ಹಣ ಸಂಪಾದಿಸಲು ಈ ಕೆಲಸವನ್ನು ಮಾಡಿದ್ದಾರೆ. ಜೋಸೆಫ್ ಎಂಬ ಮತ್ತೊಬ್ಬ ವಿದೇಶಿ ಆರೋಪಿ ಮತ್ತು ಪ್ರಭು ಎಂಬ ಭಾರತೀಯನೂ ಸಹ ಈ ಅಪರಾಧದಲ್ಲಿ ಭಾಗಿಯಾಗಿದ್ದು, ಈ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *