ಇನ್ನೆರಡು ತಿಂಗಳು ಕೊರೊನಾ ಮಹಾಬ್ಲಾಸ್ಟ್- ಡೆಡ್ಲಿ ವೈರಸ್‍ಗೆ ಸರ್ಕಾರದಿಂದ 2 ಪ್ಲಾನ್ ರೆಡಿ

Public TV
2 Min Read

ಬೆಂಗಳೂರು: ರಾಜ್ಯಕ್ಕೆ ಇನ್ನೆರಡು ತಿಂಗಳಲ್ಲಿ ಮಹಾ ಕಂಟಕವೇ ಎದುರಾಗಲಿದೆ. ತಜ್ಞರ ವರದಿ ಸರ್ಕಾರವನ್ನ ಬೆಚ್ಚಿಬೀಳಿಸಿದೆ. ಇತ್ತ ರಾಜ್ಯ ಸರ್ಕಾರ ಕೊರೊನಾ ತಡೆಗೆ ಸರ್ಕಾರ ಪ್ಲಾನ್ ‘ಬಿ’ ಮತ್ತು ಪ್ಲಾನ್ ‘ಸಿ’ ರೆಡಿ ಮಾಡಿಕೊಂಡಿದೆ.

ಕರುನಾಡಿಗೆ ಕೊರೊನಾ ಕಂಟಕ ತಪ್ಪುವ ಲಕ್ಷಣಗಳು ಕಾಣ್ತಿಲ್ಲ. ಜೂನ್ ತಿಂಗಳಲ್ಲಿ ಕೊರೊನಾ ಆರ್ಭಟಿಸ್ತಿರೋ ಹೊತ್ತಲ್ಲೇ ಜುಲೈ, ಆಗಸ್ಟ್ ನಂತರವೂ ಕೊರೊನಾ ಸೋಂಕು ಉತ್ತುಂಗಕ್ಕೆ ಏರಲಿದೆ ಅಂತ ರಾಜ್ಯ ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಕಳೆದ 10 ದಿನದಿಂದ ದಿನಕ್ಕೆ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಮುಂಬೈ, ದೆಹಲಿಯಂತೆ ರಾಜ್ಯಕ್ಕೆ ಎದುರಾಗಲಿದ್ಯಾ ಅನ್ನೋ ಆತಂಕ ಎದುರಾಗಿದೆ. ಇನ್ನೆರಡು ತಿಂಗಳಲ್ಲಿ ಕೊರೊನಾ ಮಹಾಸ್ಫೋಟಗೊಂಡ್ರೆ ಆಸ್ಪತ್ರೆಗಳಲ್ಲಿ ಬೆಡ್‍ಗಳ ಸಮಸ್ಯೆಯೂ ಎದುರಾಗಬಹುದು. ಚಿಕಿತ್ಸೆ ನೀಡಲು ಸಮಸ್ಯೆಯೂ ಎದುರಾದರೂ ಆಗಬಹುದು. ಹೀಗಾಗಿ ಕೊರೊನಾ ತಡೆಗೆ ರಾಜ್ಯ ಸರ್ಕಾರ ಪ್ಲಾನ್ ‘ಬಿ’ ಮತ್ತು ಪ್ಲಾನ್ ‘ಸಿ’ ರೆಡಿ ಮಾಡಿಕೊಂಡಿದೆ.

ಏನದು ಪ್ಲಾನ್ ಬಿ?:
ಹೋಂ ಕ್ವಾರಂಟೈನ್ ಬಳಿಕ ಹೋಂ ಐಸೋಲೇಷನ್‍ಗೆ ಸರ್ಕಾರ ಪ್ಲಾನ್ ಮಾಡಿದೆ. ಸೋಂಕಿನ ಲಕ್ಷಣ ಇಲ್ಲದಿದ್ದರೂ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗ್ತಿದ್ದು, ಶೇ.70ರಷ್ಟು ಕೇಸ್‍ಗೆ ಕೊರೊನಾ ಲಕ್ಷಣಗಳೇ ಇಲ್ಲ. ಹೀಗಾಗಿ ಸೋಂಕಿನ ಲಕ್ಷಣ ಇಲ್ಲದ ಸೋಂಕಿತರಿಗೆ ಮನೆಯಲ್ಲಿಯೇ ಐಸೊಲೇಷನ್ ಮಾಡಲು ಸರ್ಕಾರ ಪ್ಲಾನ್ ಮಾಡಿದೆ. ಗಂಭೀರ ಪ್ರಕರಣಗಳಿಗೆ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಚಿಂತನೆ ನಡೆಸಿದೆ.

ಮನೆಯಲ್ಲಿ ಚಿಕಿತ್ಸೆ ಹೇಗೆ ಸಿಗಲಿದೆ?:
ಗಂಭೀರ ಲಕ್ಷಣ ಇಲ್ಲದಿದ್ದರೆ ಮನೆಯಲ್ಲಿಯೇ ಇರುವ ಪ್ರತ್ಯೇಕ ಕೋಣೆಯಲ್ಲಿ ಐಸೋಲೇಷನ್ ಮಾಡಲಾಗುತ್ತೆ. ಸೋಂಕಿತ ವ್ಯಕ್ತಿಯ ಕುಟುಂಬಸ್ಥರು ಮನೆಯಿಂದ ಹೊರಗೆ ಬರುವಂತಿಲ್ಲ. ಸೋಂಕಿತನ ಇಡೀ ಮನೆಯನ್ನೇ ಕಂಟೈನ್ಮೆಂಟ್ ಮಾಡಿ, ಮನೆ ಬಳಿ ಪೊಲೀಸ್ ಅಥವಾ ಬಿಬಿಎಂಪಿ ಸಿಬ್ಬಂದಿಯನ್ನು ನೇಮಕ ಮಾಡುವ ಸಾಧ್ಯತೆ ಇದೆ. ಸೋಂಕಿತ ಮತ್ತವರ ಕುಟುಂಬಸ್ಥರ ಮೇಲೆ ವೈದ್ಯರ ತಂಡ ನಿಗಾವಹಿಸಲಿದ್ದು, ಅವಶ್ಯಕತೆ ಬಿದ್ದರೆ ಮನೆಯಲ್ಲಿಯೇ ಚಿಕಿತ್ಸೆ ನೀಡುವ ಬಗ್ಗೆಯೂ ಪ್ಲಾನ್ ಮಾಡಲಾಗಿದೆ. ನಿತ್ಯ ವಿಟಮಿನ್ ಔಷಧಿ ನೀಡಿ ಆರೋಗ್ಯ ಸಿಬ್ಬಂದಿಯಿಂದ ಚಿಕಿತ್ಸೆ ನೀಡುವ ಚಿಂತನೆ ನಡೆದಿದೆ.

ಸರ್ಕಾರದ ‘ಪ್ಲಾನ್-ಸಿ’ ಹೇಗಿರುತ್ತೆ?:
ಒಂದು ಕಡೆ ಮನೆಯಲ್ಲೇ ಚಿಕಿತ್ಸೆ ಮಾಡೋದು ಸರ್ಕಾರದ ಪ್ಲಾನ್ ‘ಬಿ’ ಆಗಿದ್ದರೆ, ಇನ್ನೊಂದು ಕಡೆ ಪ್ಲಾನ್ ‘ಸಿ’ ರೆಡಿ ಮಾಡಿದೆ. ದೆಹಲಿ, ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಅಸ್ಸಾಂ ಮಾದರಿಯಲ್ಲಿ ಈ ಪ್ಲಾನ್ ‘ಸಿ’ ರೆಡಿಯಾಗಿದೆ.

ಕೊರೊನಾ ಚಿಕಿತ್ಸೆಗೆ ಬಯಲು ಪ್ರದೇಶ, ಸ್ಟೇಡಿಯಂ ತಾತ್ಕಾಲಿಕವಾಗಿ ಆಸ್ಪತ್ರೆಯಾಗಲಿವೆ. ಬೆಂಗಳೂರಿನ 3-4 ಸ್ಥಳಗಳು ಅಂದರೆ ಕಂಠೀರವ ಸ್ಟೇಡಿಯಂ, ಬಳ್ಳಾರಿ ರಸ್ತೆಯ ತ್ರಿಪುರವಾಸಿನಿ, ತುಮಕೂರು ರಸ್ತೆಯ ಇಂಟರ್‍ನ್ಯಾಷನಲ್ ಎಕ್ಸಿಬಿಷೇನ್ ಸೆಂಟರ್, ವೈಟ್‍ಫೀಲ್ಡ್ ರಸ್ತೆಯಲ್ಲಿ ತಾತ್ಕಾಲಿಕ ಆಸ್ಪತ್ರೆಗೆ ಸರ್ಕಾರ ಚಿಂತನೆ ನಡೆಸಿದೆ.

ಈ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆಗಸ್ಟ್ 15ರ ನಂತರದಲ್ಲಿ ರಾಜ್ಯದಲ್ಲಿ ಕೊರೋನಾ ಹೆಚ್ಚಾಗುವ ಬಗ್ಗೆ ಪರಿಣಿತರು ಅಧ್ಯಯನ ಮಾಡಿ ಹೇಳಿದ್ದಾರೆ. ಹೀಗಾಗಿ ನಾವು ಅದಕ್ಕೆ ತಯಾರಿ ನಡೆಸಬೇಕಿದೆ ಅಂತ ಹೇಳಿದ್ರು.

ರಾಜ್ಯ ಸರ್ಕಾರದ ಈ ಪ್ಲಾನ್ ದೆಹಲಿ ಮಾಡೆಲ್ ಆಗಿದೆ. ಬೆಂಗಳೂರಲ್ಲಿ ಸೈಲೆಂಟ್ ಆಗಿ ಕೊರೊನಾ ಹಬ್ಬೋಕೆ ಕಾರಣ ಏನೂ ಅನ್ನೋದರ ಬಗ್ಗೆ ತಜ್ಞರು ಸರ್ಕಾರಕ್ಕೆ ಕಂಪ್ಲೀಟ್ ರಿಪೋರ್ಟ್ ಒಪ್ಪಿಸಿದರೆ, ಕೊರೊನಾ ಸೋಂಕು ಹರಡುವುದನ್ನ ತಡೆಯೋದೆ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *