ಇಡೀ ವಿಶ್ವದಲ್ಲೇ ರೈತನಿಗೆ ಯಾವುದೇ ಜಾತಿ ಇಲ್ಲ: ಡಿಕೆಶಿ

Public TV
2 Min Read

– ಕಾಂಗ್ರೆಸ್ಸಿಗೆ ರೈತರೇ ಜೀವಾಳ

ಮಂಡ್ಯ: ಇಡೀ ವಿಶ್ವದಲ್ಲೇ ರೈತನಿಗೆ ಯಾವುದೇ ಜಾತಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಇಂದು ಕಾಂಗ್ರೆಸ್ ಪಕ್ಷದಿಂದ ಮಂಡ್ಯದಲ್ಲಿ ರೈತ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಈ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ, ಇದು ದೊಡ್ಡ ಸಮಾವೇಶ ಅಲ್ಲ. ಇಲ್ಲಿ ಕೊಡುವ ಸಂದೇಶ ಮುಖ್ಯ. ಸಂಬಳ, ಪ್ರಮೋಷನ್, ಲಂಚ, ನಿವೃತ್ತಿ ಇಲ್ಲದ ರೈತನನ್ನು ಕಾಪಾಡಬೇಕು. ಇಡೀ ವಿಶ್ವದಲ್ಲೇ ರೈತನಿಗೆ ಯಾವುದೇ ಜಾತಿ ಇಲ್ಲ ಎಂದರು.

ಇಡೀ ದೇಶದಲ್ಲೇ ನಮ್ಮ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಬಂದವರು ಅನ್ನದಾತರು. ನಮ್ಮ ಹಳ್ಳಿ ಸೊಗಡು, ಸಂಸ್ಕೃತಿಯನ್ನು ಕಾಪಾಡುತ್ತಿರುವವರು ಇದೇ ಮಣ್ಣಿನ ಮಕ್ಕಳು. ಯಾವ ಕಾರ್ಖಾನೆ, ವ್ಯಾಪಾರ ನಿಂತರೂ ಕೂಡ ಅನ್ನ ನೀರು ಕೊಟ್ಟು ಜೀವ ಉಳಿಸುವ ಅನ್ನದಾತರ ಕೆಲಸ ನಿಲ್ಲಲಿಲ್ಲ. ಈ ರೀತಿಯ ರೈತರ ಸ್ಮರಿಸಲು ಈ ಸಮಾವೇಶ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ಸಮಾವೇಶದಲ್ಲಿ ಡಿಕೆಶಿ ರೈತರ ಗುಣಗಾನ ಮಾಡಿದರು. ಇದನ್ನು ಓದಿ: ಕಾಂಗ್ರೆಸ್‍ಗೆ ಮಂಡ್ಯದ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ: ಹೆಚ್‍ಡಿಕೆ

ನಾನು ಕೂಡ ಕೃಷಿ ಕುಟುಂಬ ಹಿನ್ನೆಲೆಯಿಂದ ಬಂದವನು. ನಮ್ಮ ಶಾಲು ಕಾಂಗ್ರೆಸ್ ಪಕ್ಷದ ಶಾಲಲ್ಲ. ಸೂರ್ಯನಿಗೂ ಭೂಮಿಗೂ ಇರುವ ಸಂಬಂಧವನ್ನು ಉಳಿಸಿಕೊಂಡು ಬರುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ನಮಗೆ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಇತಿಹಾಸ ಇದೆ. ನಮಗೆ ಸ್ವಾಭಿಮಾನ ಶಕ್ತಿ ಉಸಿರನ್ನು ನೀಡಿದವರು ಹಸಿರು ಶಾಲು ತೊಟ್ಟವರು. ಕಾಂಗ್ರೆಸ್‍ಗೆ ರೈತರೆ ಜೀವಾಳ. ಹೀಗಾಗಿ ಅನ್ನದಾತನಿಗೆ ಹೇಗೆ ನೆರವಾಗಲು ಸಾಧ್ಯ ಎಂಬುದನ್ನು ತಿಳಿಯಲು ಈ ಸಮಾವೇಶ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇವತ್ತು ಯಾರಾದರೂ ಒಬ್ಬ ರೈತನಿಗೆ, ವ್ಯಾಪಾರಿ, ವಿದ್ಯಾರ್ಥಿ, ಕಾರ್ಮಿಕರು ಮತ್ತು ಯುವಕರಿಗೆ ಸಮಾಧಾನ ಇದೆಯಾ? ದೆಹಲಿ, ಬಾಂಬೆಯಲ್ಲಿರುವ ದೊಡ್ಡ ದೊಡ್ಡ ಕುಳಗಳಿಗೆ ಸಮಾಧಾನ ಆಗಿರೋದರು ಬಿಟ್ಟರೆ ಇನ್ನಾರಿಗೂ ಸಮಾಧಾನವಿಲ್ಲ. ಐದತ್ತು ಸಾವಿರಕ್ಕೆ ಮಡದಿ ಮಕ್ಕಳ ಚಿನ್ನವನ್ನು ಅಡವಿಡುವ ಪರಿಸ್ಥಿತಿ ರೈತರಿಗೆ ಬಂದಿದೆ. ಅನ್ನದಾತರನ್ನ ಗಾಣದಲ್ಲಾಕಿ ಅರೆದು ಬಿಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ರೈತನ ನೆರವಿಗೆ ಬರಲಿಲ್ಲ. ರೈತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅವರಿಗೆ ಸ್ಪಂದಿಸದ ಬಿಎಸ್‍ವೈ ಅಧಿಕಾರದಲ್ಲಿ ಯಾಕಿರಬೇಕು ಎಂದು ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *