ಇಡಿ ಅಧಿಕಾರಿಗಳಿಗೂ ಕೊರೊನಾ ಸೋಂಕು

Public TV
1 Min Read

– 6 ಅಧಿಕಾರಿಗಳಿಗೆ ಪಾಸಿಟಿವ್
– 10 ಅಧಿಕಾರಿಗಳು ಕ್ವಾರಂಟೈನ್

ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ)ದ ಆರು ಜನ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಎರಡು ದಿನಗಳ ಕಾಲ ಇಡಿ ಕೇಂದ್ರ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ವರದಿಯಾಗಿದೆ.

ಒಟ್ಟು 6 ಜನ ಅಧಿಕಾರಿಗಳಿಗೆ ಸೋಂಕು ತಗುಲಿದ್ದು, ಕೊರೊನಾ ಪಾಸಿಟಿವ್ ಕಾಣಿಸಿಕೊಂಡ 6 ಜನ ಅಧಿಕಾರಿಗಳ ಸಂಪರ್ಕದಲ್ಲಿದ್ದ 10 ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಇತ್ತೀಚೆಗೆ ಇಡಿ ಕೇಂದ್ರ ಕಚೇರಿಯ ಸ್ಥಾಪನ ಶಾಖೆಯ ಕಿರಿಯ ದರ್ಜೆಯ ಅಧಿಕಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಇವರು ಕೇಂದ್ರ ಅರೆ ಸೈನ್ಯ ಪಡೆಯಿಂದ ಇಡಿ ನಿಯೋಗದಲ್ಲಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ದಂಧೆ ಕುರಿತ ಅಪರಾಧಗಳ ಕುರಿತು ತನಿಖೆ ನಡೆಸುವ ಕೇಂದ್ರ ಸಂಸ್ಥೆ ಇಡಿ, ಕೊರೊನಾ ಕುರಿತು ಕಟ್ಟೆಚ್ಚರ ವಹಿಸಿತ್ತು. ಕೇಂದ್ರ ಕಚೇರಿಯನ್ನು ವಾರದಲ್ಲಿ ಎರಡು ಬಾರಿ ಸ್ಯಾನಿಟೈಸ್ ಮಾಡುತ್ತಿತ್ತು. ಅಲ್ಲದೆ ನಿರ್ದಿಷ್ಟ ದಿನದ ಕೆಲಸಕ್ಕೆ ಅಗತ್ಯವಿರುವ ನೌಕರರನ್ನು ಮಾತ್ರ ಕಚೇರಿಗೆ ಬರುವಂತೆ ಸೂಚಿಸಲಾಗಿತ್ತು. ಇಷ್ಟೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಇದೀಗ 6 ಜನ ಅಧಿಕಾರಿಗಳಿಗೆ ಸೋಂಕು ತಗುಲಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ದಿನ 9,887 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ವರಗೆ ಒಂದು ದಿನದಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ ಇದು ಅತೀ ಹೆಚ್ಚು ಎನ್ನಲಾಗಿದೆ. ಅಲ್ಲದೆ ಒಂದೇ ದಿನ 294 ಜನ ಸಾವನ್ನಪ್ಪಿದ್ದು, ಈ ವರೆಗೆ 6,642 ಜನ ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ. ದೇಶಲ್ಲಿ ಒಟ್ಟು 2.3 ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 1.14 ಲಕ್ಷ ಜನ ಗುಣಮುಖರಾಗಿದ್ದಾರೆ. ಕೊರೊನಾ ಪ್ರಕರಣಗಳ ಪೈಕಿ ಭಾರತ ಇಟಲಿಯನ್ನು ಹಿಂದಿಕ್ಕಿದ್ದು, ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣ ಹೊಂದಿದ ದೇಶಗಳ ಪೈಕಿ 6ನೇ ಸ್ಥಾನಕ್ಕೇರಿದೆ.

Share This Article
Leave a Comment

Leave a Reply

Your email address will not be published. Required fields are marked *