ಇಂಧನ ಬೆಲೆ ಏರಿಸಿ ಜನರನ್ನು ಲೂಟಿ ಮಾಡಲಾಗುತ್ತಿದೆ – IYC ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಆರೋಪ

Public TV
1 Min Read

ನವದೆಹಲಿ: ಪೆಟ್ರೋಲ್, ಡಿಸೇಲ್‍ನ ನಿರಂತರ ಬೆಲೆ ಏರಿಕೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಇಂದು ದೆಹಲಿಯಲ್ಲಿ ಯೂತ್ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.

ಅಧ್ಯಕ್ಷ ಬಿ.ವಿ ಶ್ರೀವಾಸ್ ನೇತೃತ್ವದಲ್ಲಿ ದೆಹಲಿ ಪ್ರಮುಖ ರಸ್ತೆಗಳಲ್ಲಿ ಎತ್ತಿನಗಾಡಿ ಓಡಿಸಿ, ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ಮಾತನಾಡಿದ ಬಿ.ವಿ ಶ್ರೀನಿವಾಸ್, ಅಂತರಾಷ್ಟ್ರೀಯ ಮಟ್ಟದಲ್ಲಿ ಈಗ ಕಚ್ಚಾ ತೈಲದ ಬೆಲೆ ವ್ಯಾಪಕವಾಗಿ ಕುಸಿದಿದೆ. ಆದರೂ ಕೇಂದ್ರ ಸರ್ಕಾರ ಕಳೆದ 23 ದಿನಗಳಿಂದ ನಿರಂತರವಾಗಿ ಪ್ರತಿನಿತ್ಯವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುತ್ತಿರುವುದು ಸರಿಯಲ್ಲ ಎಂದರು.

ಕಚ್ಚಾ ತೈಲದ ಬೆಲೆ ಇಳಿಕೆಯಾದಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದು ಸಾಮಾನ್ಯವಾದ ಸಂಗತಿ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲ ಕುಸಿದಿದ್ದರೂ ಪ್ರತಿದಿನವೂ ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಿಸುತ್ತಿದೆ. ಈ ಮೂಲಕ ಲಾಕ್‍ಡೌನ್ ಮತ್ತು ಕೊರೊನಾ ಕಷ್ಟದಲ್ಲಿರುವ ಜನ ಸಾಮಾನ್ಯರಿಂದ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಜನರು ಕಷ್ಟದಲ್ಲಿದ್ದಾಗಲೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನರಿಗೆ ಬೇಕಿರುವ ಇತರೆ ಅಗತ್ಯ ವಸ್ತುಗಳ ಬೆಲೆಗಳು ಕೂಡ ಏರಿಕೆಯಾಗುತ್ತಿವೆ ಹೀಗಾಗಿ ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಶ್ರೀನಿವಾಸ್ ಒತ್ತಾಯಿಸಿದರು.

ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಪವಾರ್, ಕಾರ್ಯದರ್ಶಿಗಳಾದ ಖುಸ್ಬೂ ಶರ್ಮಾ, ಮುಖೇಶ್ ಕುಮಾರ್, ಮೋಹಿತ್ ಚೌಧರಿ, ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *