ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಭಾರತಕ್ಕೆ ಅಪ್ಪಳಿಸಲಿದೆ ಭಾರೀ ಚಂಡಮಾರುತ

Public TV
2 Min Read

– ಕರ್ನಾಟಕದಲ್ಲಿ ಹಲವೆಡೆ ಭಾರೀ ಮಳೆ ಸಾಧ್ಯತೆ
– ಮುಂಬೈಗೆ ಅಪ್ಪಳಿಸಲಿದೆ ನಿಸರ್ಗ

ಬೆಂಗಳೂರು: ಇವತ್ತು ರಾತ್ರಿ ಅಥವಾ ನಾಳೆ ಬೆಳಗ್ಗೆ ಭಾರೀ ಚಂಡಮಾರುತ ಏಳುವ ಎಲ್ಲಾ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮುನ್ಸೂಚನೆ ನೀಡಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ರೀನಿವಾಸ್ ರೆಡ್ಡಿ, ನಮಗೆ ಬಂದಿರುವ ಮುನ್ಸೂಚನೆ ಪ್ರಕಾರ ಇಂದು ‘ನಿಸರ್ಗ’ ಸೈಕ್ಲೋನ್ ಏಳುವ ಸಾಧ್ಯತೆ ಇದೆ. ಪೂರ್ವ ಅರಬ್ಬಿ ಸಮುದ್ರದಲ್ಲಿ ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನ್ ಆಗಬಹುದು. ಗಾಳಿಯ ವೇಗ ಪ್ರತಿ ಗಂಟೆಗೆ 60-70 ಕಿ.ಮೀ ಇರುತ್ತದೆ. ತದನಂತರ ಇವತ್ತು ರಾತ್ರಿ ಅಥವಾ ನಾಳೆ ಬೆಳಗ್ಗೆ ಪ್ರಬಲ ಚಂಡಮಾರುವಾಗಿ ಬದಲಾಗುವ ಎಲ್ಲಾ ಲಕ್ಷಣಗಳು ಇವೆ. ಆದರೆ ಇದರ ಪಥ ನೋಡಿದಾಗ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಮುಂಬೈಗೆ ಹೋಗಿ ಅಪ್ಪಳಿಸುವ ಸಾಧ್ಯತೆ ಇದೆ. ಅಲ್ಲಿಂದ ಮುಂದುವರಿದು ಮಧ್ಯ ಪ್ರದೇಶ, ಉತ್ತರ ಪ್ರದೇಶದ ಕೆಲವು ಕಡೆ ಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಕಳೆದ ಒಂದು ವಾರದಿಂದ ಉತ್ತರ ಭಾಗದ ಒಳನಾಡಿನಲ್ಲಿ ಮಳೆಯಾಗಿರಲಿಲ್ಲ. ಆದರೆ ವಾಯುಭಾರದ ಕುಸಿತನ ನಂತರ ಬೆಳಗಾವಿ, ಧಾರವಾಡ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಂಗಳೂರು, ಹಾಸನ, ಕೊಡಗು, ಹಾವೇರಿ ಅನೇಕ ಕಡೆ ಮಳೆಯಾಗುತ್ತಿದೆ. ಇಂದು ಹಾಗೂ ನಾಳೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಬಹುದು. ಇದರ ಪರಿಣಾಮ ಸ್ವಲ್ಪ ಪ್ರವಾಹ ಕೂಡ ಆಗಬಹುದು. ನಂತರ ಮಳೆ ಕಡಿಮೆಯಾಗಿತ್ತದೆ. ಆದರೆ ಮಳೆಯಿಂದ ನಮಗೆ ದೊಡ್ಡ ಪರಿಣಾಮದ ನಷ್ಟ ಉಂಟಾಗುವ ಸಾಧ್ಯತೆ ಕಡಿಮೆ ಇದೆ. ಯಾಕೆಂದರೆ ಅದು ಮುಂದಕ್ಕೆ ಚಲಿಸುವುದರಿಂದ ಇಷ್ಟು ದಿನದ ಮಳೆಗಿಂತ ನಾಳೆ ಮಳೆ ಕಡಿಮೆಯಾಗಲಿದೆ ಎಂದು ಸೂಚನೆ ನೀಡಿದರು.

ಕರಾವಳಿಯ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಣ ಕನ್ನಡ ಮತ್ತು ಉಡುಪಿಯಲ್ಲಿ ಸಮುದ್ರದ ಅಲೆಗಳ ಉಬ್ಬರ ಜಾಸ್ತಿಯಾಗುತ್ತವೆ. ಸುಮಾರು 2.6 ರಿಂದ 3.7 ಮೀಟರ್ ಎತ್ತರದವರೆಗೂ ಅಬ್ಬರ ಹೆಚ್ಚಾಗುವ ಸಾಧ್ಯತೆ. ನಾಳೆ ಇದೇ ರೀತಿ ಮುಂದುವರಿಯಲಿದೆ. ಇನ್ನೂ ಎರಡು-ಮೂರು ದಿನಗಳಲ್ಲಿ ಮಳೆ ಕಡಿಮೆಯಾಗುತ್ತವೆ. ಈಗಾಗಲೇ ಮುಂಗಾರು ಮಳೆ ಸೋಮವಾರ ಕೇರಳದಲ್ಲಿ ಬಂದಿದೆ. ಈ ಮುಂಗಾರು ಮಳೆ ತರಲು ಈ ಸೈಕ್ಲೋನ್ ಸಹಾಯ ಮಾಡಿತ್ತು. ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುತ್ತಿದೆ ಎಂದು ಶ್ರೀನಿವಾಸ್ ರೆಡ್ಡಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *