ಇಂದು ಮೇಲುಕೋಟೆಯ ಐತಿಹಾಸಿಕ ವೈರಮುಡಿ ಉತ್ಸವ

Public TV
1 Min Read

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವನಾರಯಣಸ್ವಾಮಿಯ ಐತಿಹಾಸಿಕ ವೈರಮುಡಿ ಉತ್ಸವ ಇಂದು ಕೊರೊನಾ ಹಿನ್ನೆಲೆ ಸರಳವಾಗಿ ಜರುಗಲಿದೆ. ಹೀಗಾಗಿ ಇಂದು ಬೆಳಗ್ಗೆ ಮಂಡ್ಯದ ಜಿಲ್ಲಾ ಖಜಾನೆಯಿಂದ ವಜ್ರ ಖಚಿತ ವೈರಮುಡಿ ಕಿರೀಟವನ್ನು ಮೇಲುಕೋಟೆಗೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ರವಾನೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಅಶ್ವಥಿ, ಎಸ್‍ಪಿ ಅಶ್ವಿನಿ, ಚಲುವನಾರಯಣಸ್ವಾಮಿ ದೇವಾಲಯದ ಸ್ಥಾನಿಕರ ಸಮ್ಮುಖದಲ್ಲಿ ಮೊದಲಿಗೆ ಆಭರಣಗಳ ಪರಿಶೀಲನೆ ಮಾಡಲಾಯಿತು. ಬಳಿಕ ಸಂಪ್ರದಾಯದಂತೆ ಜಿಲ್ಲಾಧಿಕಾರಿ ಅವರು ಪೂಜೆ ಸಲ್ಲಿಸಿದರು. ನಂತರ ವಾಡಿಕೆಯಂತೆ ಮಂಡ್ಯದ ಲಕ್ಷ್ಮಿ ಜನಾರ್ಧನ ದೇವಾಲಯದಲ್ಲೂ ಪೂಜೆ ಸಲ್ಲಿಸಲಾಯಿತು. ಮೇಲುಕೋಟೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಬರುವ ಎಲ್ಲಾ ಗ್ರಾಮದ ಗ್ರಾಮಸ್ಥರು ಪೂಜೆ ಸಲ್ಲಿಸುವುದು ವಾಡಿಕೆ. ಸಂಜೆಯ ವೇಳೆಗೆ ಮೇಲುಕೋಟೆಗೆ ಕಿರೀಟ ತಲುಪಲಿದೆ.

ರಾತ್ರಿ 8.30 ಕ್ಕೆ ಚಲುವನಾರಾಯಣಸ್ವಾಮಿಗೆ ಕಿರೀಟ ಧಾರಣೆ ಮಾಡಿ ವೈರಮುಡಿ ಉತ್ಸಚವನ್ನು ಆರಂಭ ಮಾಡಲಾಗುತ್ತದೆ. ಮಧ್ಯರಾತ್ರಿ 12.30ರ ವರೆಗೆ ರಾಜ ಬೀದಿಯಲ್ಲಿ ಐತಿಹಾಸಿಕ ಉತ್ಸವ ಜರುಗಲಿದೆ. ಕೊರೊನಾ ಅಟ್ಟಹಾಸ ಇರುವ ಕಾರಣ ಈ ಬಾರಿಯ ಉತ್ಸವಕ್ಕೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯದ ಭಕ್ತರಿಗೆ ನಿಷೇಧ ವಿಧಿಸಲಾಗಿದೆ. ಸ್ಥಳೀಯರು ಮಾತ್ರ ಈ ಉತ್ಸವದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಲ್ಗೊಳ್ಳಬೇಕೆಂದು ಹೀಗಾಗಲೇ ಜಿಲ್ಲಾಡಳಿತ ಸೂಚನೆ ನೀಡಲಾಗಿದೆ.

ಉತ್ಸವದಲ್ಲಿ ಪಾಲ್ಗೊಳ್ಳದೇ ಇರುವ ಭಕ್ತರು ನಿರಾಶೆಯಾಗಬಾರದೆಂದು ಜಿಲ್ಲಾಡಳಿತ ಯು ಟೂಬ್ ಲೈವ್‍ನಲ್ಲಿ https://youtu.be/O7Y3Q2Oqk_8 ವೈರಮುಡಿ ಉತ್ಸವನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಿದೆ.

Share This Article