ಇಂದು ಮತ್ತೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

Public TV
1 Min Read

– 11ದಿನಗಳಿಂದ ಏರುತ್ತಿರುವ ದರ

ನವದೆಹಲಿ: ದೇಶದಲ್ಲಿ ಕಳೆದ 11 ದಿನಗಳಿಂದ ಪೆಟ್ರೋಲ್, ಡೀಸಲ್ ಬೆಲೆ ಏರುತ್ತಲೇ ಇದ್ದು, 11ನೇ ದಿನವಾದ ಇಂದು ಪೆಟ್ರೋಲ್ ಬೆಲೆ 55 ಪೈಸೆ ಹಾಗೂ ಡೀಸೆಲ್ 69 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ಕೇವಲ 11 ದಿನಗಳಲ್ಲಿ ಪೆಟ್ರೋಲ್ ಬೆಲೆ 6 ರೂ. ಹಾಗೂ ಡೀಸೆಲ್ 6.49 ರೂ.ಗಳಷ್ಟು ಹೆಚ್ಚಳವಾಗಿದೆ.

ಕಳೆದ 11 ದಿನಗಳಲ್ಲಿ ಪ್ರತಿ ದಿನ 20 ಪೈಸೆಯಿಂದ 80 ಪೈಸೆ ವರೆಗೂ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಬೆಲೆ ಹೆಚ್ಚಳದಿಂದಾಗಿ ಜನ ಕಂಗಾಲಾಗಿದ್ದಾರೆ. ಮೊದಲೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ಕೆಲಸವಿದ್ದರೂ ಸಂಬಳ ಸರಿಯಾಗಿ ಬರುತ್ತಿಲ್ಲ. ಅಲ್ಲದೆ ಇನ್ನೊಂದೆಡೆ ಸಾರ್ವಜನಿಕ ಸಾರಿಗೆ ಸಹ ಸಮರ್ಪಕವಾಗಿಲ್ಲ ಇಂತಹ ಸಂದರ್ಭದಲ್ಲಿ ಇಂಧನ ದರ ಹೆಚ್ಚಿಸಿರುವ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಲಾಕ್‍ಡೌನ್‍ನಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಜನತೆಗೆ ಇಂಧನ ಬೆಲೆ ಹೆಚ್ಚಾಗಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಈ ಕಿರಿತು ಟೀಕಿಸಿವೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ಕುರಿತು ಮಂಗಳವಾರವಷ್ಟೇ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ಜನರಿಗೆ ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸರಿಯಲ್ಲ, ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿಂಪಡೆಯಿರಿ ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಿದ್ದರೂ, ಸರ್ಕಾರ ಅದರ ಲಾಭವನ್ನು ಜನರಿಗೆ ನೀಡದೆ, ಇಂತಹ ಕಷ್ಟದ ಸಮಯದಲ್ಲಿ ಬೆಲೆ ಏರಿಸಿ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ. ತಕ್ಷಣವೇ ಬೆಲೆ ಏರಿಕೆಯನ್ನು ಹಿಂಪಡೆದು ಜನರಿಗೆ ಬೆಲೆ ಇಳಿಕೆಯ ಲಾಭ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *