ಇಂದಿನಿಂದ ಹೊಸ ದುಬಾರಿ ಜೀವನ – ಎಲ್‍ಪಿಜಿ ಸಿಲಿಂಡರ್, ಹಾಲು, ಬ್ಯಾಂಕಿಂಗ್ ಚಾರ್ಜ್ ಹೆಚ್ಚಳ

Public TV
2 Min Read

ನವದೆಹಲಿ: ಇಂದಿನಿಂದ ಹೊಸ ದುಬಾರಿ ಜೀವನಕ್ಕೆ ಜನರು ಹೊಂದಿಕೊಳ್ಳಬೇಕಿದೆ. ಕೊರೊನಾ ಲಾಕ್‍ಡೌನ್ ವೇಳೆ ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಸಂಕಷ್ಟದ ನಡುವೆ ಬೆಲೆ ಏರಿಕೆ ಹೊಡೆತ ಸಾರ್ವಜನಿಕರ ಮೇಲೆ ಬೀಳಲಿದೆ. ಹಾಲು, ಎಲ್‍ಪಿಜಿ ಸಿಲಿಂಡರ್ ಮತ್ತು ಬ್ಯಾಂಕ್ ಸೇವೆಗಳ ಶುಲ್ಕ ಇಂದಿನಿಂದ ಏರಿಕೆಯಾಗಲಿದೆ.

ದುಬಾರಿ ಆಯ್ತು ಅಮೂಲ್ ಹಾಲು:
ಅಮೂಲ್ ಹಾಲು ಇಂದಿನಿಂದ ತನ್ನ ಬೆಲೆಯನ್ನ ಹೆಚ್ಚಿಸಿಕೊಂಡಿದೆ. ದೆಹಲಿ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಅಮೂಲ್ ಉತ್ಪನ್ನಗಳು ತುಟ್ಟಿಯಾಗಲಿವೆ. ಪ್ರತಿ ಲೀಟರ್ ಹಾಲಿನ ಮೇಲೆ ಎರಡು ರೂಪಾಯಿಯನ್ನ ಅಮೂಲ್ ಹೆಚ್ಚಳ ಮಾಡಿಕೊಂಡಿದೆ. ಅಮೂಲ್ ಒಂದೂವರೆ ವರ್ಷದ ಬಳಿಕ ತನ್ನ ಉತ್ಪನ್ನಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಿಕೊಂಡಿದೆ. ಬುಧವಾರವೇ ಅಮೂಲ್ ತನ್ನ ಬೆಲೆ ಏರಿಕೆಯ ಮಾಹಿತಿಯನ್ನು ನೀಡಿತ್ತು.

ಇಂದಿನಿಂದ ಅಮೂಲ್ ಗೋಲ್ಡ್ 58 ರೂ. ಪ್ರತಿ ಲೀಟರ್, ಅಮೂಕ್ ತಾಜಾ 46 ರೂ. ಪ್ರತಿ ಲೀ., ಅಮೂಲ್ ಶಕ್ತಿ 52 ರೂ.ಪ್ರತಿ ಲೀಟರ್ ಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಅಮೂಲ್ ಬಳಿಕ ಇನ್ನುಳಿದ ಹಾಲು ಉತ್ಪಾದಕ ಕಂಪನಿಗಳು ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

ಬ್ಯಾಂಕ್ ಚಾರ್ಜ್ ಹೆಚ್ಚಳ:
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‍ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ತನ್ನ ಸೇವಾ ಶುಲ್ಕವನ್ನು ಹೆಚ್ಚಿಸಿಕೊಂಡಿದೆ. ಈಗ ಗ್ರಾಹಕರು ಎಟಿಎಂನಿಂದ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಉಚಿತವಾಗಿ ಹಣ ಡ್ರಾ ಮಾಡಬಹುದು. ನಾಲ್ಕಕ್ಕಿಂತ ಹೆಚ್ಚಿನ ವಹಿವಾಟು ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಪ್ರತಿ ವಹಿವಾಟಿನ ಮೇಲೆ 15 ರೂ.ಶುಲ್ಕವನ್ನು ಗ್ರಾಹಕರು ಪಾವತಿಸಬೇಕು.

ಚೆಕ್ ಬಳಕೆ ಮೇಲೆಯೂ ಶುಲ್ಕ: ಎಟಿಎಂ ಮಾತ್ರ ಅಲ್ಲದೇ ಚೆಕ್ ಬಳಕೆಯ ಮೇಲೆಯೂ ಎಸ್‍ಬಿಐ ಶುಲ್ಕ ವಿಧಿಸುತ್ತಿದೆ. ವಿತ್ತಿಯ ವರ್ಷದಲ್ಲಿ ಒಬ್ಬ ಗ್ರಾಹಕ 10 ಚೆಕ್ ಗಳ ಬಳಕೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. 10ಕ್ಕಿಂತ ಹೆಚ್ಚಾದ್ರೆ ಬ್ಯಾಂಕಿನ ಶುಲ್ಕ ಪಾವತಿಸಬೇಕು. ಎಸ್‍ಬಿಐ ಜೊತೆ ಆಕ್ಸಿಸ್, ಐಡಿಬಿಐ ಬ್ಯಾಂಕ್ ಸಹ ಎಸ್‍ಎಂಎಸ್, ಲಾಕರ್ ಚಾರ್ಜ್ ಹೆಚ್ಚಿಸಿಕೊಂಡಿವೆ. ಇಂದಿನಿಂದಲೇ ಈ ಹೊಸ ಶುಲ್ಕಗಳು ಅನ್ವಯವಾಗಲಿವೆ.

ಟಿಡಿಎಸ್ ಕಟ್: ಕಳೆದ ಎರಡು ವರ್ಷಗಳಿಂದ ಐಟಿಆರ್ ಪಾವತಿಸದ ಜನರ ಟಿಡಿಎಸ್ ಜುಲೈನಿಂದ ಹೆಚ್ಚು ಕಟ್ ಆಗಲಿದೆ. 50 ಸಾವಿರ ರೂ.ಕ್ಕಿಂತ ಹೆಚ್ಚು ಟಿಡಿಎಸ್ ಕಟ್ ಆಗುವರಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ.

ಎಲ್‍ಪಿಜಿಯೂ ತುಟ್ಟಿಯಾಯ್ತು:
ಇದೆಲ್ಲದರ ಜೊತೆ ಎಲ್‍ಪಿಜಿ ಸಿಲಿಂಡರ್ ಬೆಲೆಯೂ ಇಂದಿನಿಂದ ಹೆಚ್ಚಳವಾಗುತ್ತಿದೆ. ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ಮೇಲೆ 25 ರೂ. ಹೆಚ್ಚು ನೀಡಬೇಕು. ಗೃಹ ಬಳಕೆಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 834 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ 861 ರೂಪಾಯಿ, ಬೆಂಗಳೂರಿನಲ್ಲಿ 812 ರೂ.ಇದೆ. ಇನ್ನೂ 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ದೆಹಲಿಯಲ್ಲಿ 1,550 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ‘ಸಾಲ’ ರೂಪದ ಸಹಾಯ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಜೊತೆ ಸದ್ಯ ಹೊಸ ಹೊಸ ಶುಲ್ಕಗಳು ಜನ ಸಾಮನ್ಯರ ಜೇಬಿಗೆ ಹಂತ ಹಂತವಾಗಿ ಕತ್ತರಿ ಹಾಕಲಿವೆ. ಕಳೆದ ತಿಂಗಳಿನಲ್ಲಿ ಒಟ್ಟು 16 ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕಂಡಿದೆ. ಇದನ್ನೂ ಓದಿ: ಮೊದಲು ಲಸಿಕೆ, ನಂತರ ಮನ್ ಕೀ ಬಾತ್: ರಾಹುಲ್ ಕಿಡಿ

Share This Article
Leave a Comment

Leave a Reply

Your email address will not be published. Required fields are marked *