ಇಂದಿನಿಂದ ಸಿನಿಮಾ ಪ್ರದರ್ಶನ

Public TV
2 Min Read

ಬೆಂಗಳೂರು: ಅನ್‍ಲಾಕ್ 5ರಲ್ಲಿ ಕೇಂದ್ರ ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಚಿತ್ರರಂಗಗಳಲ್ಲಿ ಹೊಸ ಸಂಚಲನ ಮೂಡಿಸಿತ್ತು. ಆದರೆ ನಿರ್ಮಾಪಕರು, ಪ್ರದರ್ಶಕರು, ಡಿಜಿಟಲ್ ವಿತರಕರಗಳ ನಡುವಿನ ಗೊಂದಲದಿಂದಾಗಿ ಸದ್ಯ ಹೊಸ ಸಿನಿಮಾಗಳು ತೆರೆಗೆ ಬರುವುದು ಕಷ್ಟಸಾಧ್ಯವಾಗಿದೆ. ಅಕ್ಟೋಬರ್ 15ರಿಂದ ಸಿನಿಮಾ ಪ್ರದರ್ಶನಕ್ಕೆ ಅವಕಾಶವೇನೋ ಸಿಕ್ಕಿದೆ. ಅದಕ್ಕೆ ತಕ್ಕಂತೆ ರಾಜ್ಯಾದ್ಯಂತ ಹಲವು ಥಿಯೇಟರ್ ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳು ಸಿನಿಮಾ ಮಂದಿರಗಳನ್ನು ಸಿದ್ಧತೆ ಕೂಡ ಮಾಡಿಕೊಂಡಿವೆ. ಆದರೆ ನಿರ್ಮಾಪಕರು, ಪ್ರದರ್ಶಕರು ಹಾಗೂ ಡಿಜಿಟಲ್ ಪ್ರೊವೈಡರ್ ಗಳ ನಡುವಿನ ಗೊಂದಲಗಳಿಂದಾಗಿ ಹೊಸ ಸಿನಿಮಾಗಳು ಈ ತಿಂಗಳು ತೆರೆಗೆ ಬರುವುದು ಬಹುತೇಕ ಅನುಮಾನ ಎನ್ನಲಾಗಿದೆ.

ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಿದ್ದರು. ಡಿಜಿಟಲ್ ಸರ್ವೀಸ್ ವಿತರಕರಾದ ಕ್ಯೂಬ್ ಮತ್ತು ಯೂಎಫ್‍ಓ ಪ್ರತಿನಿಧಿಗಳ ಜತೆ ಚರ್ಚೆ ನಡೆಸಿದರು. ಕಳೆದ ಏಳು ತಿಂಗಳಿನಿಂದ ಸಿನಿಮಾ ರಿಲೀಸ್ ಆಗದ ಕಾರಣ ನಿರ್ಮಾಪಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಎರಡು ವರ್ಷಗಳ ಕಾಲ ವರ್ಚುವಲ್ ಪ್ರಿಂಟ್ ಶುಲ್ಕದಲ್ಲಿ ಸಂಪೂರ್ಣ ರಿಯಾಯಿತಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಇವತ್ತು ಯೂಎಫ್‍ಓ ಮತ್ತು ಕ್ಯೂಬ್ ಪ್ರಕಟಣೆ ಹೊರಡಿಸಿವೆ. ಆ ಪ್ರಕಾರ ವರ್ಚುವಲ್ ಪ್ರಿಂಟ್ ಶುಲ್ಕವನ್ನು 2020ರ ಡಿಸೆಂಬರ್ ಅಂತ್ಯದವರೆಗೆ ಶೇಕಡ 50ರಷ್ಟು ವಿನಾಯಿತಿ ನೀಡಲು ಒಪ್ಪಿಕೊಂಡಿವೆ.

ಇತ್ತ ನಿರ್ಮಾಪಕರು 2 ವರ್ಷಗಳ ಕಾಲ ಶೇಕಡ 100ರಷ್ಟು ವಿನಾಯಿತಿ ನೀಡಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ಯೂಎಫ್‍ಓ, ಕ್ಯೂಬ್‍ನಂತಹ ಡಿಜಿಟಲ್ ಸರ್ವೀಸ್ ಪ್ರೊವೈಡರ್ ಗಳು ಸಿನಿಮಾಗಳ ಜತೆಗೆ ಟ್ರೈಲರ್ ಗಳು, ಜಾಹೀರಾತುಗಳನ್ನೂ ಪ್ರದರ್ಶಿಸಿ ಹಣಗಳಿಸುತ್ತಾರೆ. ಆದರೆ ನಿರ್ಮಾಪಕರಿಗೆ ಅದರಲ್ಲೇನೂ ಒಂದಿಷ್ಟು ಭಾಗ ಅಂತ ಲಾಭ ನೀಡುವುದಿಲ್ಲ. ಈಗ ಕಷ್ಟದ ಸಮಯದಲ್ಲೂ ನಮಗೆ ಸ್ಪಂದಿಸದಿದ್ದರೆ ಹೇಗೆ ಅಂತ ಪಟ್ಟುಹಿಡಿದಿದ್ದಾರೆ.

ಇದರ ನಡುವೆ, ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವೆಯೂ ಮತ್ತೊಂದು ಬಗೆಯ ಹಗ್ಗಜಗ್ಗಾಟ ಮುಂದುವರಿದಿದೆ. ಮಲ್ಟಿಪ್ಲೆಕ್ಸ್ ಗಳಂತೆ ಶೇರಿಂಗ್ ರೀತಿ ವ್ಯವಹಾರ ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ವಾರದ ಬಾಡಿಗೆ ರೂಪದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್ ಗಳಿಗೆ ಹಣ ನೀಡುವುದು ಕಷ್ಟ ಅನ್ನೋದು ನಿರ್ಮಾಪಕರ ಅಭಿಪ್ರಾಯ. ಈ ಕುರಿತೂ ಸದ್ಯ ಸ್ಪಷ್ಟನೆ ದೊರೆತಿಲ್ಲ.

ಈ ಎಲ್ಲ ಗೊಂದಲಗಳ ನಡುವೆಯೇ ಸಿನಿಮಾ ಪ್ರದರ್ಶನಕ್ಕೆ ಕೆಲ ಥಿಯೇಟರ್ ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳು ರೆಡಿಯಾಗಿದ್ದು, ಹಲವು ಥಿಯೇಟರ್ ಗಳೂ ಸಿದ್ಧತೆ ಮಾಡಿಕೊಂಡಿವೆ. ಹೊಸ ಸಿನಿಮಾಗಳ ನಿರ್ಮಾಪಕರು ಸದ್ಯ ರಿಲೀಸ್‍ಗೆ ಹಿಂದೇಟು ಹಾಕುತ್ತಿರುವ ಕಾರಣ ಈಗಾಗಲೇ ರಿಲೀಸ್ ಆಗಿದ್ದ ಶಿವಾರ್ಜುನ, ಲವ್ ಮಾಕ್‍ಟೇಲ್, ದಿಯಾ, ಶಿವಾಜಿ ಸೂರತ್ಕಲ್, 5 ಅಡಿ 7 ಅಂಗುಲ, ವಜ್ರಮುಖಿ ಸೇರಿದಂತೆ ಇನ್ನೂ ಕೆಲ ಸಿನಿಮಾಗಳು ರೀ-ರಿಲೀಸ್ ಆಗಲಿವೆ.

Share This Article
Leave a Comment

Leave a Reply

Your email address will not be published. Required fields are marked *