ಇಂದಿನಿಂದ ಡಿಎಲ್‌, ಆರ್‌ಸಿ ಕಾರ್ಡ್‌ ಬದಲು ಇ- ಕಾಪಿ ತೋರಿಸಿ – 5 ಬದಲಾವಣೆ ಓದಿ

Public TV
2 Min Read

ನವದೆಹಲಿ: ಇಂದಿನಿಂದ ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು ಇನ್ನು ಮುಂದೆ ವಾಹನ ಸವಾರರು/ ಚಾಲಕರು ಚಾಲನಾ ಪರವಾನಗಿ (ಡಿಎಲ್‌) ಮತ್ತು ರಿಜಿಸ್ಟ್ರೇಷನ್‌ ಸರ್ಟಿಫಿಕೆಟ್‌ (ಆರ್‌ಸಿ) ಕಾರ್ಡ್‌ಗಳ ಬದಲು ಇ–ಕಾಪಿಗಳನ್ನು ತೋರಿಸಬಹುದು.

1989 ರಿಂದ 2020ರವರೆಗಿನ ಮೋಟಾರು ವಾಹನ ನಿಯಮಾವಳಿಗಳಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿತ್ತು. ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೋಟಿಫಿಕೇಶನ್‌ ಹೊರಡಿಸಿದ್ದು ಇಂದಿನಿಂದ ಹೊಸ ಬದಲಾವಣೆ ಜಾರಿಗೆ ಬರಲಿದೆ.

ಏನು ಬದಲಾವಣೆ?
1. ಕಾರ್ಡ್‌ ತೋರಿಸುವ ಅಗತ್ಯವಿಲ್ಲ:
ಇಲ್ಲಿಯವರೆಗೆ ಡಿಎಲ್‌ ಮತ್ತು ಆರ್‌ಸಿ ಕಾರ್ಡ್‌ಗಳನ್ನು ಸವಾರರು ಜೊತೆಯಲ್ಲೇ ಇಟ್ಟುಕೊಳ್ಳಬೇಕಿತ್ತು. ಸಂಚಾರಿ ಪೊಲೀಸರ ತಪಾಸಣೆಯ ವೇಳೆ ಇದನ್ನು ತೋರಿಸಬೇಕಿತ್ತು. ಆದರೆ ಇನ್ನು ಮುಂದೆ ತಪಾಸಣೆಯ ವೇಳೆ ಇ-ಕಾಪಿಗಳನ್ನು ತೋರಿಸಬಹುದಾಗಿದೆ.

ಇಷ್ಟೇ ಅಲ್ಲದೇ ಒಂದು ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ಕೇಸ್‌ ದಾಖಲಾದಾಗ ಇ -ದಾಖಲೆಗಳನ್ನು ಅಧಿಕಾರಿಗಳು ಸೀಜ್‌ ಮಾಡಬಹುದು. ಇದರ ಜೊತೆ ಇ-ಚಲನ್‌ ಮೂಲಕ ದಂಡವನ್ನು ಪಾವತಿಸಬಹುದು. ಸರ್ಕಾರದ ಡಿಜಿಟಲ್‌ ಪೋರ್ಟಲ್‌ನಲ್ಲಿ ಇ- ಚಲನ್‌ ಲಭ್ಯವಿದೆ.

2. ಉಲ್ಲಂಘನೆ ಮಾಹಿತಿ ಅಪ್‌ಡೇಟ್‌:
ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಸವಾರನ ಮೇಲೆ ಕೇಸ್‌ ದಾಖಲಾದ ಅಂಶವೂ ಡಿಜಿಟಲ್‌ ಪೋರ್ಟಲ್‌ನಲ್ಲಿ ನಿರಂತರವಾಗಿ ಅಪ್‌ಡೇಟ್‌ ಆಗುತ್ತದೆ. ಪೋರ್ಟಲ್ ಅನ್ನು ಕಾಲಾನುಕ್ರಮದಲ್ಲಿ ನವೀಕರಿಸಲಾಗುತ್ತಿರುತ್ತದೆ.

3. ಹೊಸ ವ್ಯವಸ್ಥೆಯಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ:
ಸವಾರರ ಎಲ್ಲ ಉಲ್ಲಂಘನಾ ಪ್ರಕರಣಗಳು ಪೋರ್ಟಲ್‌ನಲ್ಲಿ ದಾಖಲಾಗುತ್ತಿರುತ್ತದೆ. ಇದರಿಂದಾಗಿ ಸವಾರನ ನಡತೆಯನ್ನು ಅಧಿಕಾರಿಗಳು ತಿಳಿಯಬಹುದು. ಅಷ್ಟೇ ಅಲ್ಲದೇ ಸಂಚಾರ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೋ ಇಲ್ಲವೋ ಎನ್ನುವುದು ಇದರಲ್ಲಿ ಗೊತ್ತಾಗುತ್ತದೆ.

4. ದಾಖಲೆಗಳನ್ನು ಎಲ್ಲಿ ಸಂಗ್ರಹಿಸಬಹುದು?
ಕೇಂದ್ರ ಸರ್ಕಾರದ ಡಿಜಿ ಲಾಕರ್‌ ಅಥವಾ ಎಂ–ಪರಿವಾಹನ್‌‌ ರೀತಿಯ ಪೋರ್ಟಲ್‌ಗಳಿಗೆ ದಾಖಲೆಗಳನ್ನು ಅಪ್‌ಲೋಡ್‌ ಮಾಡಬಹುದು. ತಪಾಸಣೆ ಸಮಯದಲ್ಲಿ ಕೇಳಿದಾಗ ಡಿಜಿಟಲ್‌ ಪ್ರತಿಯನ್ನು ತೋರಿಸಬಹುದು.

5. ಮಾರ್ಗಸೂಚಿಗಾಗಿ ಮೊಬೈಲ್‌ ಬಳಕೆ
ವಾಹನ ಚಾಲನೆ ಮಾಡುವ ಸಮಯದಲ್ಲಿ ಮಾರ್ಗ ತಿಳಿಯಲು (ಮ್ಯಾಪ್‌/ನ್ಯಾವಿಗೇಷನ್‌) ಮಾತ್ರ ಮೊಬೈಲ್‌ ಬಳಕೆ ಮಾಡಬಹುದಾಗಿದೆ. ಡ್ರೈವರ್‌ ಏಕಾಗ್ರತೆಗೆ ಭಂಗ ಬಾರದ ರೀತಿಯಲ್ಲಿ ಬಳಸಬೇಕು ಎಂದು ತಿಳಿಸಲಾಗಿದೆ. ಒಂದು ವೇಳೆ ಚಾಲನೆಯ ಸಮಯದಲ್ಲಿ ಈ ಕಾರಣವನ್ನು ಹೊರತು ಪಡಿಸಿ ಮೊಬೈಲ್‌ ಬಳಕೆ ಮಾಡಿದ್ದು ಕಂಡು ಬಂದಲ್ಲಿ ಈಗ ಇರುವ ಸಂಚಾರ ನಿಯಮಗಳ ಪ್ರಕಾರ ದಂಡ ವಿಧಿಸಲಾಗುತ್ತದೆ.

ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಿದರೆ 1,000 ದಿಂದ 5 ಸಾವಿರ ರೂ.ಗಳ ವರೆಗೆ ದಂಡ ವಿಧಿಸಲು ಅವಕಾಶವಿದೆ. ಈ ನಿಯಮವೂ ಅ. 1 ರಿಂದ ಜಾರಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *