ಇಂಡೋ, ಆಸೀಸ್‌ ಮ್ಯಾಚ್‌ – ಬಾಕ್ಸಿಂಗ್‌ ಡೇ ಟೆಸ್ಟ್‌ ಎಂದು ಯಾಕೆ ಕರೆಯುತ್ತಾರೆ?

Public TV
3 Min Read
ಮೆಲ್ಬರ್ನ್‌:  ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾದಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ತೆಗೆಯಲಾಗುತ್ತಿದೆ. ವಿಕ್ಟೋರಿಯಾ ರಾಜ್ಯದ ಪ್ರೀಮಿಯರ್‌ ಡೇನಿಯಲ್‌ ಆಂಡ್ರ್ಯೂಸ್‌ ಪ್ರತಿಕ್ರಿಯಿಸಿ, ಮೆಲ್ಬರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ವೀಕ್ಷಕರು ಇರುತ್ತಾರೆ ಎಂದು ನಾನು ವಿಶ್ವಾಸದಿಂದ ಹೇಳುತ್ತೇನೆ ಎಂದು ಹೇಳಿದ್ದಾರೆ.
ಬಾಕ್ಸಿಂಗ್‌ ಡೇ ಯಾಕೆ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಟೆಸ್ಟ್‌ ಪಂದ್ಯಕ್ಕೆ ಬಾಕ್ಸಿಂಗ್‌ ಡೇ ಎಂದು ಕರೆಯಲು ಕಾರಣವಿದೆ.  ಇಂಗ್ಲೆಂಡ್ ಹಾಗೂ ಹಲವು ದೇಶಗಳಲ್ಲಿ ಕ್ರಿಸ್‌ಮಸ್ ಮರುದಿನ ಅಂದರೆ ಡಿಸೆಂಬರ್ 26ರ ರಜಾದಿನವನ್ನೂ ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ.  ಜರ್ಮನಿ, ಪೊಲೆಂಡ್,  ರೋಮೆನಿಯಾ, ಹಂಗೇರಿ, ನೆದರ್ಲೆಂಡ್ಸ್ ಸೇರಿದಂತೆ ಕೆಲ ದೇಶಗಳಲ್ಲಿ ಡಿಸೆಂಬರ್ 26ರನ್ನು ಸೆಕೆಂಡ್ ಕ್ರಿಸ್‌ಮಸ್ ಡೇ ಎಂದು ಆಚರಿಸಲಾಗುತ್ತಿದೆ.  ಈ ದಿನ ಸಾರ್ವಜನಿಕ ರಜಾ ದಿನವಾಗಿದ್ದು, ಐರ್ಲೆಂಡ್‌ ಹಾಗೂ ಸ್ಪೇನ್‌ನ ಕ್ಯಾಟಲೋನಿಯಾ ರೀಜನ್‌ನಲ್ಲಿ ʼಸೈಂಟ್ ಸ್ಟೀಫನ್ ಡೇʼ ಎಂದು ಕರೆಯಲಾಗುತ್ತದೆ.
ಈ ಹಿಂದೆ ಆಸ್ಟ್ರೇಲಿಯಾ ಬ್ರಿಟಿಷರ ವಸಹತು ಆಗಿತ್ತು. ಈ ಸಮಯದಲ್ಲಿ ಇಂಗ್ಲೆಂಡ್‌ ರಾಜಮನೆತನದವರು ಕ್ರಿಸ್ಮಸ್‌ ಸಮಯದಲ್ಲಿ ಕೆಲಸ ಮಾಡಿದ ನೌಕರರಿಗೆ ಡಿ.26 ರಂದು ಬಾಕ್ಸ್‌ ಮೂಲಕ ಉಡುಗೊರೆ ನೀಡುತ್ತಿದ್ದರು. ಬಾಕ್ಸ್‌ಗಳಲ್ಲಿ ಸಿಹಿ ತಿಂಡಿ ಸೇರಿದಂತೆ ಹಲವು ಉಡುಗೊರೆ ಡಿ.26 ರಂದು ಸಿಗುತ್ತಿದ್ದ ಕಾರಣ ಈ ದಿನಕ್ಕೆ ‘ಬಾಕ್ಸಿಂಗ್‌ ಡೇ’ ಎಂಬ ಹೆಸರು ಬಂತು. ಹೀಗಾಗಿ ಈ ದಿನ ನಡೆಯುವ ಟೆಸ್ಟ್ ಪಂದ್ಯಕ್ಕೆ ‘ಬಾಕ್ಸಿಂಗ್ ಡೇ ಟೆಸ್ಟ್’ ಪಂದ್ಯ ಎಂಬ ಹೆಸರು ಬಂದಿದೆ.
ಮೆಲ್ಬರ್ನ್‌ನಲ್ಲೇ ಯಾಕೆ?
ಬಹಳ ಹಿಂದೆ ಕ್ರಿಸ್ಮಸ್‌ ಸಮಯದಲ್ಲಿ ಶೆಫೀಲ್ಡ್ ಶೀಲ್ಡ್ (ಆಸ್ಟ್ರೇಲಿಯಾದ ಪ್ರಥಮ ದರ್ಜೆ ಕ್ರಿಕೆಟ್‌) ಕ್ರಿಕೆಟ್‌ ಟೂರ್ನಿ ವಿಕ್ಟೋರಿಯಾ  ಮತ್ತು ನ್ಯೂ ಸೌತ್‌ ವೇಲ್ಸ್‌  ತಂಡಗಳ ನಡುವೆ ಮೆಲ್ಬರ್ನ್‌ನಲ್ಲಿ ನಡೆಯುತ್ತಿತ್ತು. 1950-51 ರಲ್ಲಿ ಆಶಸ್‌ ಸರಣಿ ಡಿ.22 ರಿಂದ 27 ರವರೆಗೆ ಮೆಲ್ಬರ್ನ್‌ ಅಂಗಳದಲ್ಲಿ ನಡೆದಿತ್ತು. ಈ ಪಂದ್ಯದ ನಾಲ್ಕನೇ ದಿನವನ್ನು(ಡಿ.26) ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತಿತ್ತು.  ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆಡಿತ್ತು. ಪಂದ್ಯದ ನಾಲ್ಕನೇ ದಿನವಾದ ಬಾಕ್ಸಿಂಗ್ ಡೆ ದಿನ ಬರೋಬ್ಬರಿ 60,486 ಮಂದಿ ಕ್ರಿಕೆಟ್‌  ವೀಕ್ಷಿಸಿದ್ದರು.
1980ರಲ್ಲಿ ಡಿಸೆಂಬರ್ 22 ರಿಂದ 27 ರವರೆಗೆ ನಡೆಯತ್ತಿದ್ದ ಟೆಸ್ಟ್ ಪಂದ್ಯದ ದಿನಾಂಕವನ್ನು ಬದಲಾಯಿಸಿ ಡಿ.26 ರಂದು ಟೆಸ್ಟ್ ಕ್ರಿಕೆಟ್ ಆಯೋಜಿಸಲು ಮೆಲ್ಬರ್ನ್‌ ಕ್ರಿಕೆಟ್ ಕ್ಲಬ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿತು. ಬಳಿಕ ಪ್ರತಿ ವರ್ಷ ಡಿಸೆಂಬರ್ 26 ರಂದು ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯ ಆಯೋಜಿಸುತ್ತಿದೆ.  ಇಂಗ್ಲೆಂಡ್, ಭಾರತ, ದಕ್ಷಿಣ  ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡಿದೆ. 1985ರಲ್ಲಿ  ಭಾರತ ಮೊದಲ ಬಾಕ್ಸಿಂಗ್‌ ಡೇ ಟೆಸ್ಟ್‌ ಆಡಿತ್ತು. ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.
ಭಾರತದ ಸಾಧನೆ ಏನು?
ಭಾರತ ಮೊದಲು ಬಾಕ್ಸಿಂಗ್ ಡೆ ಟೆಸ್ಟ್ ಪಂದ್ಯ ಆಡಿದ್ದು 1985ರಲ್ಲಿ. 1985, 1991, 1999, 2003, 2007, 2011, 2014, 2018 ರಲ್ಲಿ ಭಾರತ ಬಾಕ್ಸಿಂಗ್‌ ಡೇ ಟೆಸ್ಟ್‌ ಆಡಿದೆ. ಈ ಪೈಕಿ 1985 ಮತ್ತು 2014ರ ಪಂದ್ಯ ಡ್ರಾ ಗೊಂಡಿತ್ತು. 2018ರ ಪಂದ್ಯವನ್ನು 137 ರನ್‌ಗಳಿಂದ ಗೆದ್ದುಕೊಂಡಿತ್ತು.  ಉಳಿದ 5 ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ.
2018ರಲ್ಲಿ ಕೊಹ್ಲಿ ನೇತೃತ್ವದ ಭಾರತ ಮೊದಲ ಇನ್ನಿಂಗ್ಸ್‌ ಅನ್ನು  443 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿತ್ತು.  ಆಸ್ಟ್ರೇಲಿಯಾ 151 ರನ್‌ಗಳಿಗೆ ಆಲೌಟ್‌ ಆಗಿತ್ತು. ಭಾರತ ಎರಡನೇ ಇನ್ನಿಂಗ್ಸ್‌ ಅನ್ನು 106 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿದ್ದರೆ  ಆಸ್ಟ್ರೇಲಿಯಾ 261 ರನ್‌ಗಳಿಗೆ ಆಲೌಟ್‌ ಆಗಿತ್ತು.  ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌  ಪಡೆದು ಮಿಂಚಿದ್ದರು. 9 ವಿಕೆಟ್‌ ಪಡೆದು ಆಸ್ಟ್ರೇಲಿಯಾ ಸೋಲಿಗೆ ಕಾರಣವಾಗಿದ್ದ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
Share This Article
Leave a Comment

Leave a Reply

Your email address will not be published. Required fields are marked *