ಇಂಗ್ಲೆಂಡ್ ಸರಣಿಗೆ ಆಯ್ಕೆಯಾದ ಆಟಗಾರರಿಗೆ ಕೋವಿಶೀಲ್ಡ್ ಲಸಿಕೆ ಪಡೆಯಲು ಬಿಸಿಸಿಐ ಸೂಚನೆ

Public TV
2 Min Read

ಮುಂಬೈ: ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾದ 24 ಆಟಗಾರರು ಮತ್ತು ಇತರ ಸಿಬ್ಬಂದಿ ಕೋವಿಶೀಲ್ಡ್ ಲಸಿಕೆ ಪಡೆಯುವಂತೆ ಬಿಸಿಸಿಐ ಸೂಚನೆ ನೀಡಿದೆ.

14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮೊದಲು ಕೆಲ ಫ್ರಾಂಚೈಸ್‍ಗಳು ಆಟಗಾರರು ಕೊರೊನಾ ಲಸಿಕೆ ಪಡೆಯಬಹುದೆ ಎಂದು ಬಿಸಿಸಿಐನೊಂದಿಗೆ ಕೇಳಿತ್ತು. ಆ ಸಂದರ್ಭ ಬಿಸಿಸಿಐ ಲಸಿಕೆ ಪಡೆಯದಂತೆ ನಿರ್ಬಂಧ ವಿಧಿಸಿತ್ತು. ಬಳಿಕ ಇದೀಗ ಕೊರೊನಾದಿಂದಾಗಿ ಐಪಿಎಲ್ ಮುಂದೂಡಲ್ಪಟ್ಟಿದೆ. ಹಾಗಾಗಿ ಆಟಗಾರರೆಲ್ಲರೂ ಕೂಡ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಇದೀಗ ಬಿಸಿಸಿಐ ಎಲ್ಲಾ ಆಟಗಾರರು ಕೊರೊನಾ ಲಸಿಕೆ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.

ಅದರಲ್ಲೂ ಕೂಡ ಮುಖ್ಯವಾಗಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೋವಿಶೀಲ್ಡ್ ಲಸಿಕೆಯನ್ನೇ ಪಡೆಯಬೇಕು ಎಂದು ಸೂಚನೆ ಹೊರಡಿಸಿದೆ. ಈ ಕುರಿತು ಸ್ಥಳೀಯ ಮಾಧ್ಯಮವೊಂದರ ಜೊತೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಐಪಿಎಲ್ ಸ್ಥಗಿತಗೊಂಡ ಬಳಿಕ ಎಲ್ಲಾ ಆಟಗಾರರು ಅವರವರ ಮನೆಗಳಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಇದೀಗ ದೇಶದಲ್ಲಿ 18 ರಿಂದ 44ರ ವಯೋಮಾನದವರಿಗೆ ಲಸಿಕೆ ಹಾಕಲಾಗುತ್ತಿದೆ. ಹಾಗಾಗಿ ಕ್ರಿಕೆಟಿಗರೆಲ್ಲರೂ ಲಸಿಕೆ ಪಡೆದುಕೊಳ್ಳಲಿ. ಅದರಲ್ಲೂ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುತ್ತಿರುವ 24 ಆಟಗಾರರು ಕಡ್ಡಾಯವಾಗಿ ಕೋವಿಶೀಲ್ಡ್ ಲಸಿಕೆಯನ್ನು ಪಡೆಯಬೇಕು ಏಕೆಂದರೆ ಪ್ರಥಮ ಹಂತದ ಲಸಿಕೆಯನ್ನು ಪಡೆದ 28 ದಿನಗಳ ಬಳಿಕ ಎರಡನೇ ಹಂತದ ಲಸಿಕೆ ಪಡೆಯಬೇಕು. ಇದೀಗ ಲಸಿಕೆ ಪಡೆದ 24 ಆಟಗಾರರು ಜೂನ್‍ನಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿರುತ್ತಾರೆ ಈ ವೇಳೆ ಇಂಗ್ಲೆಂಡ್‍ನಲ್ಲಿ ಕೋವಿಶೀಲ್ಡ್ ಲಸಿಕೆ ಸುಲಭವಾಗಿ ಸಿಗುತ್ತದೆ. ಹಾಗಾಗಿ ಕೋವಿಶೀಲ್ಡ್ ಪಡೆಯುವಂತೆ ಸೂಚನೆ ನೀಡಿದ್ದೇವೆ ಎಂದಿದ್ದಾರೆ.

ಕೋವಿಶೀಲ್ಡ್ ಲಿಸಿಕೆಯನ್ನು ಇಂಗ್ಲೆಂಡ್‍ನ ಆಕ್ಸ್ ಫರ್ಡ್ ವಿವಿ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿರುವುದರಿಂದಾಗಿ ಇಂಗ್ಲೆಂಡ್‍ನಲ್ಲಿ ಈ ಲಸಿಕೆ ಸುಲಭವಾಗಿ ಸಿಗುತ್ತದೆ. ಹಾಗಾಗಿ ಈ ಲಸಿಕೆಯನ್ನು ಪಡೆಯಲು ಆಟಗಾರರಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಟೀಂ ಇಂಡಿಯಾದ ಆಟಗಾರರಾದ ವಿರಾಟ್ ಕೊಹ್ಲಿ, ಶಿಖರ್ ಧವನ್, ಅಜಿಂಕ್ಯಾ ರಹಾನೆ ಮತ್ತು ಇಶಾಂತ್ ಶರ್ಮಾ ಈಗಾಗಲೇ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಜೂನ್ 18ರಿಂದ ಇಂಗ್ಲೆಂಡ್‍ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಪಂದ್ಯ ಆರಂಭವಾಗಲಿದೆ. ಆ ಬಳಿಕ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *