ಆ ಭೀಕರ ಕನಸು ಬಿದ್ದರೆ ಬದುಕೋದೇ ಡೌಟು!

Public TV
2 Min Read

ಧ್ಯರಾತ್ರಿ ನೀವು ಅಂಗಾತ ಮಲಗಿಕೊಂಡಿರುತ್ತೀರಿ. ಜಗತ್ತಿನ ಯಾವ ಚಿಂತೆಯೂ ಸುಳಿಯದಂತಹ ನಿದಿರೆಯ ಸುಖ ನಿಮ್ಮನ್ನಾವರಿಸಿಕೊಂಡಿರುತ್ತೆ. ಅಂತಹ ಗಾಢ ನಿದ್ದೆಯಲ್ಲಿ ಯಾರೋ ಸೈತಾನ ಎದೆ ಮೇಲೆ ಕೂತು ಬಲವಾಗಿ ಕತ್ತು ಹಿಸುಕಿದಂತಾಗುತ್ತೆ. ಕುತ್ತಿಗೆಯ ನರಗಳು ಮಿಸುಕಲೂ ಬಿಡದಂತೆ ಹಿಡಿದ ಕೈಗಳ ಸ್ಪಷ್ಟ ಅನುಭವವಾಗುತ್ತೆ. ಎದೆ ಮೇಲೆ ಕೂತಂತಹ ಭಾವವನ್ನು ಆ ಭಾರದ ಅನುಭವ ಸ್ಪಷ್ಟೀಕರಿಸುತ್ತೆ. ಮಿಸುಕಲು ಪ್ರಯತ್ನಿಸಿದರೆ ದೇಹ ಸ್ಪಂದಿಸೋದಿಲ್ಲ. ಕಿರುಚಲು ನೋಡಿದರೆ ಧ್ವನಿ ಹೊರಡೋದಿಲ್ಲ.

ಅಂಥಾದ್ದೊಂದು ಕನಸು ಬಿದ್ದರೆ ಎಂಥಾ ಧೈರ್ಯಶಾಲಿಯೇ ಆದರೂ ಕಿಟಾರನೆ ಕಿರುಚಿ ಎದ್ದು ಕೂತು ಬಿಡುತ್ತಾರೆ. ಇರೋಬರೋ ಹೊದಿಕೆಯನ್ನೆಲ್ಲ ಗಟ್ಟಿಯಾಗಿ ಹೊದ್ದುಕೊಂಡು ಎಲ್ಲ ಒದ್ದೆಯಾಗುವಂತೆ ಬೆವರಾಡಿ ಬಿಡುತ್ತಾರೆ. ಇಂಥಾ ಕನಸು ಬಹುಪಾಲು ಜನರಿಗೆ ಒಂದಲ್ಲ ಒಂದು ಸಲ ಬೀಳುತ್ತೆ. ಅದರ ಅನುಭವ ಅದೆಷ್ಟು ಭೀಕರವಾಗಿರುತ್ತದೆಯೆಂದರೆ, ಕನಸಿನ ಅನುಭವ ಎದೆಯೇ ನಾಟಿದಂತಾಗಿ ಹಾಸಿಗೆಯಲ್ಲಿಯೇ ಅದೆಷ್ಟೋ ಮಂದಿ ಜೀವ ಬಿಟ್ಟಿದ್ದಿದೆ.

ಕನಸು ಯಾಕೆ ಬೀಳುತ್ತೆ? ನಿದಿರೆಯಲ್ಲಿ ಕದಲೋ ಕನಸಿನ ಸಿನಿಮಾಗಳ ಹಿಂದೆ ಯಾವ ಶಕ್ತಿ ಇದೆ ಅನ್ನೋದಕ್ಕೆ ವಿಜ್ಞಾನ ಲೋಕದಲ್ಲಿ ಒಂದಷ್ಟು ಉತ್ತರಗಳಿವೆ. ಆದರೆ ಈ ಕನಸುಗಳೊಂದಿಗೆ ನಮ್ಮಲ್ಲಿ ಗಾಢವಾದ ಮೌಢ್ಯವೇ ಹೊಸೆದುಕೊಂಡಿದೆ. ಅದಕ್ಕೆ ಪೂರಕವಾದ ಒಂದಷ್ಟು ಸಂಗತಿಗಳು ಇಲ್ಲಿನ ಆಚಾರ ವಿಚಾರಗಳಲ್ಲಿಯೇ ಸೇರಿಕೊಂಡಿದೆ. ಅದರ ಫಲವಾಗಿಯೇ ಕನಸುಗಳ ಬಣ್ಣಕ್ಕೆ ಶಕುನಗಳ ಚಿತ್ತಾರ ಮೂಡಿಕೊಂಡಿದೆ.

ಹಾಗಿದ್ದ ಮೇಲೆ ಆರಂಭದಲ್ಲಿ ಹೇಳಿದಂತಹ ಭೀಕರ ಕನಸುಗಳಿಗೆ ಕಾರಣ ಇದ್ದೇ ಇರಬೇಕಲ್ಲಾ? ಈ ಬಗ್ಗೆ ಹುಡುಕಿದರೆ ಬಂಗಾಳಿಗಳ ನಡುವೆ ಇಂತಹ ಭಯಾನಕ ಕನಸಿಗೆ ಒಂದಷ್ಟು ವಿವರಣೆಗಳಿವೆ. ಅಲ್ಲಿ ಇಂತಹ ಕನಸಿಗೆ ಬೂಬಾ ಅಂತಾರೆ. ಬೂಬಾ ಅಂದ್ರೆ ಮಾತಾಡಲಾರದ, ಮೂಕ ಎಂಬೆಲ್ಲ ಅರ್ಥಗಳಿವೆ. ಅಲ್ಲಿ ಇಂಥಾ ಕೆಟ್ಟ ಕನಸು ಬೂಬಾ ಅವತಾರದಲ್ಲಿ ಎಲ್ಲರ ಬೆನ್ನ ಹಿಂದೆ ಹೊಂಚಿ ಕುಳಿತಿರುತ್ತದೆ ಎಂಬ ನಂಬಿಕೆಯಿದೆ. ಅದೇನಾದರೂ ಅಮರಿಕೊಂಡರೆ ಸಾವು ಖಚಿತ ಎಂಬಂಥಾ ಭಯವೂ ಅಲ್ಲಿದೆ. ಅದಕ್ಕೆ ಒಂದಷ್ಟು ಮಂದಿ ಬಲಿಯಾಗಿದ್ದಾರೆ.

ಹಾಗಾದರೆ ನಿಜಕ್ಕೂ ಇಂತಹ ಬೆಚ್ಚಿ ಬೀಳಿಸೋ ಕನಸು ಯಾಕೆ ಬೀಳುತ್ತೆ ಅನ್ನೋದಕ್ಕೂ ಒಂದಷ್ಟು ವಿವರಗಳೂ ಇವೆ. ಕೆಲವೊಮ್ಮೆ ಉಸಿರಾಟದ ಏರುಪೇರೂ ಕೂಡ ಅದಕ್ಕೆ ಕಾರಣವಾಗೋದಿದೆ. ಇನ್ನುಳಿದಂತೆ ಯಾವುದೋ ನೆನಪು, ಬಯಕೆ ಮತ್ತು ಭಯಗಳೇ ಕನಸಾಗಿ ರೀಲು ಬಿಚ್ಚಿಕೊಳ್ಳುತ್ತವೆ. ನಮ್ಮಲ್ಲಿರುವ ಅಂತರ್ಗತ ಭಯವೇ ಬೂಬಾ ಅವತಾರವಾಗಿ ಆಗಾಗ ಕಾಡಿ ಬಲಿ ತೆಗೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ. ಆದ್ದರಿಂದಲೇ ಮೌಢ್ಯ ತುಂಬಿದ ಭಯಗಳಿಂದ ದೂರವಿರೋದೊಳಿತು. ಭಯ ತುಂಬಿಕೊಂಡರೆ ಅದು ಸೈತಾನನ ಅವತಾರವೆತ್ತಿ ಕನಸಲ್ಲಿ ಬಂದು ಎದೆ ಹತ್ತಿ ಕೂರುತ್ತೆ. ಕತ್ತು ಹಿಸುಕುತ್ತೆ. ಯಾಮಾರಿದರೆ ಜೀವವನ್ನೂ ತೆಗೆಯುತ್ತೆ.

https://www.youtube.com/watch?v=2Ms5XvqEOKE

Share This Article
Leave a Comment

Leave a Reply

Your email address will not be published. Required fields are marked *