ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ – ವಾರ್ ರೂಂ ಮೇಲುಸ್ತುವಾರಿ ಕುರಿತು ಸಭೆ

Public TV
2 Min Read

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ನಿತ್ಯ ಆಮ್ಲಜನಕದ ಸಿಲಿಂಡರ್ ಪೂರೈಕೆಗೆ ಎಷ್ಟು ಬೇಡಿಕೆ ಇದೆ, ಪೂರೈಕೆ ಎಷ್ಟಾಗಿದೆ, ಪೂರೈಕೆಗೆ ಎಷ್ಟು ಬಾಕಿ ಇದೆ ಎಂಬುದರ ಮೇಲ್ವಿಚಾರಣೆಗಾಗಿ ಕೂಡಲೇ ಎಲ್ಲಾ ವಾರ್ಡ್‍ಗಳಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಎಲ್ಲ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ನಗರದಲ್ಲಿ ಕೋವಿಡ್ ಸಂಬಂಧ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಮಾಡುವ ವಾರ್ ರೂಂ ಕಾರ್ಯನಿರ್ವಹಣೆ, ವ್ಯಾಕ್ಸಿನೇಷನ್ ಹಾಗೂ ಟೆಸ್ಟಿಂಗ್ ಸಂಬಂಧಿಸಿದಂತೆ ಇಂದು ನಡೆದ ವರ್ಚುವಲ್ ಸಭೆಯಲ್ಲಿ ಮುಖ್ಯ ಆಯುಕ್ತರು ಮಾತನಾಡಿ, ನಗರದಲ್ಲಿ ಕೋವಿಡ್ ಸಂಬಂಧಿಸಿದಂತೆ ಆಮ್ಲಜನಕದ ಒಟ್ಟು ದಾಸ್ತಾನು, ಆಸ್ಪತ್ರೆಗಳಿಂದ ಸ್ವೀಕರಿಸಿದ ಬೇಡಿಕೆ ಪ್ರಮಾಣ, ಪೂರೈಸಿದ ಪ್ರಮಾಣ, ದಾಸ್ತಾನು ಖಾಲಿಯಾಗಿರುವ ಬಗ್ಗೆ ಹಾಗೂ ಸಣ್ಣ ಆಸ್ಪತ್ರೆಗಳು ಅಥವಾ ನರ್ಸಿಂಗ್ ಹೋಮ್‍ಗಳಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ಬಳಕೆ ಮಾಡುತ್ತಿದ್ದು, ಇರುವ ಸಾಮಥ್ರ್ಯಕ್ಕಿಂತ ಹೆಚ್ಚಾಗಿ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ.

ಈ ಸಂಬಂಧ ವಾರ್ಡ್‍ಗಳಲ್ಲಿ ನಿಯೋಜನೆ ಮಾಡುವ ನೋಡಲ್ ಅಧಿಕಾರಿಗಳು ಪ್ರತಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‍ಗಳಿಗೆ ಭೇಟಿ ನೀಡಿ ಎಷ್ಟು ರೋಗಿಗಳನ್ನು ದಾಖಲಿಸಿಕೊಳ್ಳುವ ಸಾಮಥ್ರ್ಯವಿದೆ ಎಂಬುದನ್ನು ಪರಿಶೀಲನೆ ನಡೆಸಬೇಕು. ಜೊತೆಗೆ ಆಮ್ಲಜನಕ ದಾಸ್ತಾನಿಗೆ ಟ್ಯಾಂಕ್ ಅಥವಾ ಸಿಲಿಂಡರ್ ಬಳಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.

ನೋಡಲ್ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಎಲ್ಲ ವಲಯ ಜಂಟಿ ಆಯುಕ್ತರು ಮಾಹಿತಿ ಸಂಗ್ರಹಿಸಿ ಕೇಂದ್ರ ಕಛೇರಿಯಲ್ಲಿರುವ ಸಮಿತಿ ತಂಡಕ್ಕೆ ಕೊಡಬೇಕು. ಆ ಬಳಿಕ ಎಂಟೂ ವಲಯಗಳ ಮಾಹಿತಿಯನ್ನು ಕ್ರೋಢೀಕರಿಸಿ ಪ್ರತಿನಿತ್ಯ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‍ಗೆ ಸಂಬಂಧಿಸಿದಂತೆ ಸ್ಥಾಪಿಸಿರುವ ವಾರ್ ರೂಂಗಳಲ್ಲಿನ ಸಿಬ್ಬಂದಿಯು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಬಗ್ಗೆ ವಾರ್ ರೂಂಗಳ ಮೇಲ್ವಿಚಾರಣೆಗಾಗಿ ಖಾಯಂ ಅಧಿಕಾರಿಯನ್ನು ನಿಯೋಜನೆ ಮಾಡಲು ಮುಖ್ಯ ಆಯುಕ್ತರು ಎಲ್ಲ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.

ನಗರದಲ್ಲಿ ವ್ಯಾಕ್ಸಿನೇಷನ್ ನೀಡುವ ಸಂಬಂಧ 45 ವರ್ಷ ಮೇಲ್ಪಟ್ಟವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆಯಬಹುದು. ಅಲ್ಲದೆ ಕೋವಿಡ್ ರೋಗ ಲಕ್ಷಣಗಳಿರುವವರು ಹಾಗೂ ಪ್ರಥಮಿಕ ಸಂಪರ್ಕಿತರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಟೆಸ್ಟ್ ಮಾಡಿದ ಸ್ಯಾಂಪಲ್‍ಗಳನ್ನು ಲ್ಯಾಬ್‍ಗಳು ತ್ವರಿತವಾಗಿ ಪರೀಕ್ಷೆ ಮಾಡಿ ಫಲಿತಾಂಶವನ್ನು ನೀಡಬೇಕು. ತ್ವರಿತವಾಗಿ ಫಲಿತಾಂಶ ನೀಡದ ಲ್ಯಾಬ್‍ಗಳಿಗೆ ತ್ವರಿತವಾಗಿ ಫಲಿತಾಂಶ ನೀಡಲು ಸೂಚನೆ ನೀಡಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *