ಆಸ್ತಿಗಾಗಿ ಸಂಜನಾ, ರಾಗಿಣಿ ಜಾಮೀನಿಗಾಗಿ ಬೆದರಿಕೆ ಪತ್ರ – ಇಬ್ಬರ ಬಂಧನ

Public TV
2 Min Read

ತುಮಕೂರು: ಬೆಂಗಳೂರಿನ ಎನ್‍ಡಿಪಿಎಸ್ ಕೋರ್ಟಿನ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಹಾಕಿದ್ದ ಪ್ರರಕಣದಲ್ಲಿ ಟ್ವಿಸ್ಟ್ ಲಭಿಸಿದ್ದು, ಕೌಟುಂಬಿಕ ಕಲಹದ ದ್ವೇಷದ ಕಾರಣದಿಂದ ಬಾಂಬ್ ಬೆದರಿಕೆ ಹಾಕಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ತಿಪಟೂರು ಮೂಲದ ರಾಜಶೇಖರ್ ಹಾಗೂ ಗುಬ್ಬಿ ತಾಲೂಕು ಹಾಗಲವಾಡಿ ಮೂಲದ ವೇದಾಂತ ಎಂಬವರನ್ನು ಬಂಧಿಸಲಾಗಿದೆ. ಕೌಟುಂಬ ಕಲಹದ ದ್ವೇಷ ಕಾರಣದಿಂದ ರಾಜಶೇಖರ್ ಪತ್ರವನ್ನು ಕಳುಹಿಸಿದ್ದ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭಿಸಿದೆ.

ಕೌಟುಂಬಿಕ ಕಲಹ: ಸದ್ಯ ಬಂಧನವಾಗಿರುವ ರಾಜಶೇಖರ್, ರಮೇಶ್ ಎಂಬಾತನ ಮೇಲೆ ದ್ವೇಷ ಸಾಧಿಸಲು ಪತ್ರ ಕಳುಹಿಸಿದ್ದ ಎನ್ನಲಾಗಿದೆ. ಈ ಇಬ್ಬರು ಒಂದೇ ಕುಟುಂಬದಲ್ಲಿ ಮದುವೆಯಾಗಿದ್ದಾರೆ. ಕೆಲ ಸಮಯದಿಂದ ರಾಜಶೇಖರ್ ಹಾಗೂ ರಮೇಶ್ ನಡುವೆ ಆಸ್ತಿ ವಿಚಾರವಾಗಿ ಜಗಳವಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ರಮೇಶ್‍ನನ್ನು ಸಿಲುಕಿಸಲು ಪ್ಲಾನ್ ಮಾಡಿದ್ದ ರಾಜಶೇಖರ್, ವೇದಾಂತನ ಸಹಾಯ ಪಡೆದು ಪತ್ರ ಬರೆಯಿಸಿದ್ದ. ಆ ಬಳಿಕ ಚೇಳೂರು ಅಂಚೆ ಕಚೇರಿಯಿಂದ ಪೋಸ್ಟ್ ಮಾಡಿದ್ದ.

ರಾಜಶೇಖರ್ ಮಾವನ ಮನೆಯ ಆಸ್ತಿಗಾಗಿ ಅವರ ಇಬ್ಬರು ಮಕ್ಕಳನ್ನು ಮದುವೆ ಆಗಬೇಕು ಎಂದು ಪ್ಲಾನ್ ಮಾಡಿದ್ದ. ಆದರೆ ಅದು ಫಲಕಾರಿ ಆಗಿರಲಿಲ್ಲ. ಕಳೆದ 9 ತಿಂಗಳ ಹಿಂದೆ ರಮೇಶ್ ಅದೇ ಮನೆಯಲ್ಲಿ ಮದುವೆಯಾಗಿದ್ದ, ಪರಿಣಾಮ ಆತನ ವಿರುದ್ಧ ಪಿತೂರಿ ಮಾಡಿದ್ದ ರಾಜಶೇಖರ್ ಪತ್ರ ಬರೆದಿದ್ದ. ಸದ್ಯ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ರಾಜಶೇಖರ್ ಆಸ್ತಿಗಾಗಿ ಕಳೆದ ವರ್ಷಗಳಿಂದ ನಾಟಕ ಮಾಡುತ್ತಿದ್ದ. ಅತ್ತೆ, ಹೆಂಡತಿ, ಮಾವ, ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ. ಈ ಹಿಂದೆ 2019ರಲ್ಲಿ ನಕಲಿ ಛಾಪಾ ಕಾಗದ ಸೃಷ್ಟಿ ಮಾಡಿ ರಮೇಶ್ ಹಾಗೂ ಮಾವನ ಮೇಲೆ ಆರೋಪ ಮಾಡಿದ್ದ. ಛಾಪಾಕಾಗದಲ್ಲಿ ಒಂದೂವರೆ ಲಕ್ಷಕ್ಕೆ ಮಗಳನ್ನೇ ಮಾರಾಟ ಮಾಡಿದ್ದಾರೆ ಎಂದು ಸೃಷ್ಟಿಸಿ ಆರೋಪಿಸಿದ್ದ. ಈ ವೇಳೆ ನಕಲಿ ಛಾಪಾಕಾಗದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ವೇಳೆ ಚೇಳೂರು ಪೊಲೀಸರು ರಾಜಶೇಖರನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಪೊಲೀಸರ ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸಿದ ರಾಜಶೇಖರ್ ಸದ್ಯ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದ ಎರಡು ಪ್ರಮುಖ ಪ್ರಕರಣಗಳ ಹೆಸರು ಬಳಿಸಿಕೊಂಡು ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದು ಆ ಆರೋಪವನ್ನು ರಮೇಶ್ ಮೇಲೆ ಹೋಗುವಂತೆ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.

Share This Article
Leave a Comment

Leave a Reply

Your email address will not be published. Required fields are marked *