ಆಶಾ ಕಾರ್ಯಕರ್ತೆಯ ಕಾರ್ಯಕ್ಕೆ ರಾಷ್ಟ್ರೀಯ ಆರೋಗ್ಯ ಮಿಷನ್‍ನಿಂದ ಪ್ರಶಂಸೆ

Public TV
2 Min Read

ಶಿವಮೊಗ್ಗ: ಕೊರೊನಾ ಸೋಂಕಿನಿಂದ ಸ್ನೇಹಿತರು, ಆಪ್ತರು ಹಾಗೂ ಸಂಬಂಧಿಕರೇ ದೂರ ಸರಿಯುತ್ತಿರುವ ಸಮಯದಲ್ಲಿ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ರಾಜ್ಯದ ದಿಟ್ಟ ಮಹಿಳೆಯೊಬ್ಬರಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಅತ್ಯುತ್ತಮ ಆಶಾ ಕಾರ್ಯಕರ್ತೆ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.

ಶಿವಮೊಗ್ಗದ ತುಂಗಾನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಮೂರು ವರ್ಷದಿಂದ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಅನ್ನಪೂರ್ಣ ಅವರ ಸೇವೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಶಂಸೆ ವ್ಯಕ್ತಪಡಿಸಿದೆ. ಕೊರೊನಾ ಸಮಯದಲ್ಲಿ ಕಂಟೈನ್ಮೆಂಟ್ ಝೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸವಾಗಿರುತ್ತದೆ. ಕೆಲವೊಮ್ಮೆ ತಮ್ಮ ಪ್ರದೇಶಗಳನ್ನು ಸೀಲ್‍ಡೌನ್ ಮಾಡಿದ ಕಾರಣಕ್ಕೆ ಸ್ಥಳೀಯರು ಪ್ರತಿಭಟನೆ ಮಾಡುತ್ತಾರೆ. ಆದರೆ ಇಂತಹ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆ ಅನ್ನಪೂರ್ಣ ಅವರು ಸ್ಥಳೀಯರನ್ನು ಮನವೊಲಿಸಿ ಕೊರೊನಾ ಬಗ್ಗೆ ತಿಳಿ ಹೇಳಿದ್ದಾರೆ.

ಬಡಾವಣೆಗೆ ಹೊರಗಿನಿಂದ ಯಾರಾದರೂ ಬಂದರೆ ಕ್ವಾರಂಟೈನ್ ಮಾಡಲು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಇವರ ಕಾರ್ಯವನ್ನು ಗುರುತಿಸಿದ ರಾಷ್ಟ್ರೀಯ ಆರೋಗ್ಯ ಮಿಷನ್ ಆಶಾ ಕಾರ್ಯಕರ್ತೆ ಅನ್ನಪೂರ್ಣ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದೆ. ಕೊಳಚೆ ಪ್ರದೇಶದಲ್ಲಿ 3,000 ಜನರು ವಾಸವಿದ್ದು, ಇಲ್ಲಿ 10 ಕಂಟೈನ್ಮೆಂಟ್ ಝೋನ್‍ಗಳಿವೆ. ಕೊರೊನಾ ಟಾಸ್ಕನ್ನು ಅನ್ನಪೂರ್ಣ ಅವರು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಯಾರೇ ಬಂದರೂ ಕೂಡಲೇ ಅಲ್ಲಿಗೆ ತೆರಳುವ ಅನ್ನಪೂರ್ಣ ಮಾಹಿತಿ ಕಲೆ ಹಾಕುತ್ತಾರೆ. ಲಕ್ಷಣಗಳ ಕುರಿತು ಪರಿಶೀಲನೆ ನಡೆಸಿ ಕ್ವಾರಂಟೈನ್‍ಗೆ ಕಳುಹಿಸುವ ಕಾರ್ಯ ಮಾಡುತ್ತಾರೆ.

ಇದರೊಂದಿಗೆ ಅನ್ನಪೂರ್ಣ ಅವರು ಕಾರ್ಯ ನಿರ್ವಹಿಸುವ ವೇಳೆ ಬಾಲ್ಯ ವಿವಾಹವೊಂದನ್ನೂ ಕೂಡ ತಡೆದಿದ್ದರು. ಬಾಲಕಿಯೊಬ್ಬಳಿಗೆ ವಿವಾಹ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಅನ್ನಪೂರ್ಣ ಅವರು ಎರಡೂ ಕುಟುಂಬಗಳ ಮನವೊಲಿಸಿ ವಿವಾಹ ನಿಲ್ಲಿಸಿದ್ದರು. ಕೊರೊನಾ ವೈರಸ್ ರಾಜ್ಯಕ್ಕೆ ಕಾಲಿಡುವುದಕ್ಕೂ ಮುನ್ನವೂ ಅನ್ನಪೂರ್ಣ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನುತ್ತಾರೆ ಆರೋಗ್ಯ ಸಿಬ್ಬಂದಿ.

ಒಬ್ಬ ಆಶಾ ಕಾರ್ಯಕರ್ತೆಯ ಸೇವೆಯನ್ನು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಗುರುತಿಸಿರುವುದಕ್ಕೆ ಇತರೆ ಆಶಾ ಕಾರ್ಯಕರ್ತೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಶಾ ಕಾರ್ಯಕರ್ತೆ ಅನ್ನಪೂರ್ಣ ಅವರ ಸೇವೆಯಿಂದ ನಾವು ಕೆಲಸ ನಿರ್ವಹಿಸಲು ಸ್ಫೂರ್ತಿ ಬಂದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *