– ಕೆಎಲ್ ರಾಹುಲ್ ಅರ್ಧಶತಕ
– 5ನೇ ಸ್ಥಾನಕ್ಕೇರಿದ ಪಂಜಾಬ್
ಚೆನ್ನೈ: ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಉತ್ತಮ ಆಟ ಪ್ರದರ್ಶಿಸಿದ ಪಂಜಾಬ್ ಕಿಂಗ್ಸ್ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 6 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಸುಲಭದ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 17.4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಆರಂಭಿಕ ಆಟಗಾರದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್‍ವಾಲ್ ಮೊದಲ ವಿಕೆಟಿಗೆ 53 ರನ್‍ಗಳ ಜೊತೆಯಾಟವಾಡಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ತಂಡದ ಮೊತ್ತ 53 ರನ್ ಗಳಿಸಿದ್ದಾಗ 25 ರನ್(20 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದಿದ್ದ ಮಯಾಂಕ್ ಔಟಾದರು. ನಂತರ ಒಂದಾದ ರಾಹುಲ್ ಮತ್ತು ಕ್ರಿಸ್ ಗೇಲ್ ಮುರಿಯದ ಎರಡನೇ ವಿಕೆಟಿಗೆ 65 ಎಸೆತಗಳಲ್ಲಿ 79 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಕೆಎಲ್ ರಾಹುಲ್ ಔಟಾಗದೇ 60 ರನ್(52 ಎಸೆತ, 3 ಬೌಂಡರಿ, 3 ಸಿಕ್ಸರ್) ಹೊಡೆದರೆ ಗೇಲ್ ಔಟಾಗದೇ 43 ರನ್(35 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದರು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಅಂಕಗಳಿಸಿ 5ನೇ ಸ್ಥಾನಕ್ಕೆ ಏರಿದ್ದರೆ ಮುಂಬೈ 4ನೇ ಸ್ಥಾನದಲ್ಲಿದೆ.
ಸಾಧಾರಣ ಮೊತ್ತ: 26 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಉರುಳಿದ ಬಳಿಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಇವರಿಬ್ಬರು ಮೂರನೇ ವಿಕೆಟಿಗೆ 56 ಎಸೆತಗಳಲ್ಲಿ 79 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ತಂಡದ ಮೊತ್ತ 105 ರನ್ ಆಗಿದ್ದಾಗ 33 ರನ್(27 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದಿದ್ದ ಸೂರ್ಯಕುಮಾರ್ ಯಾದವ್ ಔಟಾದರು. 112 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ 63 ರನ್(52 ಎಸೆತ, 5 ಬೌಂಡರಿ, 2 ಸಿಕ್ಸರ್) 17.3 ಓವರ್‍ಗಳಲ್ಲಿ ಔಟ್ ಆದರು. ಕೊನೆಯ ಓವರ್‍ಗಳಲ್ಲಿ ಆಟಗಾರರಿಂದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಬಾರದ ಕಾರಣ 6 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು.
ಮೊಹಮ್ಮದ್ ಶಮಿ, ರವಿ ಬಿಶ್ಣೋಯ್ ತಲಾ 2 ವಿಕೆಟ್ ಪಡೆದರೆ ದೀಪಕ್ ಹೂಡಾ ಮತ್ತು ಅರ್ಶದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.