ಆರ್‌ಸಿಬಿಗಾಗಿ 200 ಪಂದ್ಯಗಳನ್ನಾಡಿ ದಾಖಲೆ ಬರೆದ ಕೊಹ್ಲಿ

Public TV
1 Min Read

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ 200ನೇ ಪಂದ್ಯವನ್ನಾಡಿದ ನಾಯಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಮಾಡಿದ್ದಾರೆ.

ಗುರುವಾರ ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯವನ್ನು ಆರ್‌ಸಿಬಿ ತಂಡ ಸೋತಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡ ವಿರಾಟ್ ಕೊಹ್ಲಿಯವರ ತಾಳ್ಮೆಯ ಬ್ಯಾಟಿಂಗ್ ಮತ್ತು ಕೊನೆಯಲ್ಲಿ ಕ್ರಿಸ್ ಮೋರಿಸ್ ಮತ್ತು ಇಸುರು ಉದಾನಾ ಅವರ ಭರ್ಜರಿ ಬ್ಯಾಟಿಂಗ್‍ನಿಂದ ಪಂಜಾಬಿಗೆ 171 ರನ್ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್, ಕ್ರಿಸ್ ಗೇಲ್ ಮತ್ತು ನಾಯಕ ಕೆಎಲ್ ರಾಹುಲ್ ಅವರ ಅರ್ಧಶತಕದ ನೆರವಿನಿಂದ 8 ವಿಕೆಟ್‍ಗಳಿಂದ ಜಯ ಸಾಧಿಸಿತು.

ಬೆಂಗಳೂರು ತಂಡ ಪಂಜಾಬ್ ವಿರುದ್ಧ ಸೋತರೂ ಕೊಹ್ಲಿ ಈ ಪಂದ್ಯದಲ್ಲಿ ವಿಶೇಷ ದಾಖಲೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಒಂದೇ ತಂಡಕ್ಕಾಗಿ 200 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಖ್ಯಾತಿಗಳಿಸಿದ್ದಾರೆ. ಐಪಿಎಲ್ ಆರಂಭದಿಂದಲೂ ಆರ್‌ಸಿಬಿ ತಂಡಕ್ಕಾಗಿ ಆಡುತ್ತಿರುವ ಕೊಹ್ಲಿ, 185 ಬಾರಿ ಐಪಿಎಲ್‍ನಲ್ಲಿ ಮತ್ತು 15 ಬಾರಿ ಟಿ-20 ಚಾಂಪಿಯನ್ ಲೀಗ್‍ನಲ್ಲಿ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ.

ಇದರ ಜೊತೆಗೆ ಒಂದೇ ತಂಡಕ್ಕಾಗಿ ಆಡಿ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಕೊಹ್ಲಿ ಮಾಡಿದ್ದಾರೆ. 2008ರಿಂದ ಆರ್‌ಸಿಬಿಗಾಗಿ ಆಡುತ್ತಿರುವ ಕೊಹ್ಲಿ 176 ಐಪಿಎಲ್ ಇನ್ನಿಂಗ್ಸ್ ಗಳಲ್ಲಿ 38.56ರ ಸರಾಸರಿಯಲ್ಲಿ ಬರೋಬ್ಬರಿ 5,668 ರನ್ ಗಳಿಸಿದ್ದಾರೆ. ಇದರ ಜೊತೆಗೆ ಐಪಿಎಲ್‍ನಲ್ಲಿ ಐದು ಶತಕ ಸಿಡಿಸಿರುವ ಕೊಹ್ಲಿ ಗೇಲ್ ನಂತರ ಅತಿ ಹೆಚ್ಚು ಶತಕ ಸಿಡಿಸಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಓರ್ವ ಬ್ಯಾಟ್ಸ್ ಮ್ಯಾನ್ ಆಗಿ ಐಪಿಎಲ್‍ನಲ್ಲಿ ಉತ್ತಮ ಸಾಧನೆ ಮಾಡಿರುವ ಕೊಹ್ಲಿ ನಾಯಕನಾಗಿ ವಿಫಲರಾಗಿದ್ದಾರೆ. 2013ರಿಂದ ನಾಯಕನಾಗಿ ಆರ್‌ಸಿಬಿ ತಂಡವನ್ನು ಮುನ್ನೆಡೆಸುತ್ತಿರುವ ಕೊಹ್ಲಿ ಕಪ್ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿಲ್ಲ. ಸದ್ಯ ಈ ಬಾರಿಯ ಐಪಿಎಲ್‍ನಲ್ಲಿ ಉತ್ತಮವಾಗಿ ಆಡುತ್ತಿರುವ ಬೆಂಗಳೂರು ತಂಡ ಆಡಿರುವ ಎಂಟು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಮೂರರಲ್ಲಿ ಸೋತು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *