ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಕೊಂದ ಉಗ್ರ ಜಮ್ಮುವಿನಲ್ಲಿ ಅರೆಸ್ಟ್

Public TV
1 Min Read

ಶ್ರೀನಗರ: ಆರ್‌ಎಸ್‌ಎಸ್ ಕಾರ್ಯಕರ್ತರ ಹತ್ಯೆಯಲ್ಲಿ ಭಾಗಿಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನನ್ನು ಮತ್ತು ಆತನ ಸಹಚರನನ್ನು ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಂಧಿಸಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ಬಂಧಿತ ಉಗ್ರನನ್ನು ರುಸ್ತಮ್ ಅಲಿ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಚಂದರ್ ಕಾಂತ್ ಶರ್ಮಾ ಮತ್ತು ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಎನ್‍ಐಎ ಸಲ್ಲಿಸಿದ್ದ ಚಾರ್ಜ್ ಶೀಟ್‍ನಲ್ಲಿ ಆತನ ಹೆಸರನ್ನು ಉಲ್ಲೇಖಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳವಾರ ರಾತ್ರಿ ಉಗ್ರನನ್ನು ಕಿಶ್ತ್ವಾರ್ ಜಿಲ್ಲೆಯ ಹಂಜಲಾ ಪ್ರದೇಶದಿಂದ ಎನ್‍ಐಎ ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಪೊಲೀಸರು ಕಳೆದ ವರ್ಷ ಸೆಪ್ಟೆಂಬರ್ 23ರಂದು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಾದ ನಿಸ್ಸಾರ್ ಅಹ್ಮದ್ ಶೇಖ್, ನಿಷಾದ್ ಅಹ್ಮದ್ ಮತ್ತು ಆಜಾದ್ ಹುಸೇನ್ ನನ್ನು ಬಂಧಿಸಿದ್ದರು. ಈ ಮೂವರ ತನಿಖೆ ಮಾಡಿ ಇವರು ನೀಡಿದ ಮಾಹಿತಿ ಮೇರೆಗೆ ಈಗ ರುಸ್ತಮ್ ಅಲಿಯನ್ನು ಎನ್‍ಐಎ ಬಂಧಿಸಿದೆ.

2018ರಲ್ಲಿ ಇದೇ ಕಿಶ್ತ್ವಾರ್ ಪ್ರದೇಶದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಅನಿಲ್ ಪರಿಹಾರ್ ಅವರನ್ನು ಕೊಲೆ ಮಾಡಲಾಗಿತ್ತು. ನಂತರ 2019ರ ಏಪ್ರಿಲ್‍ನಲ್ಲಿ ಚಂದರ್ ಕಾಂತ್ ಶರ್ಮಾ ಮತ್ತು ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಈ ವಿಚಾರವಾಗಿ ಕಿಶ್ತ್ವಾರ್ ನಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಎರಡು ಪ್ರಕರಣಗಳು ಕಿಶ್ತ್ವಾರ್ ಜಿಲ್ಲೆಯಲ್ಲಿ ಉಗ್ರಗಾಮಿತ್ವವನ್ನು ಪುನರುಜ್ಜೀವನಗೊಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *