ಆರ್‌ಎಸ್‌ಎಸ್‌ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗ ಹೊಸಬಾಳೆ ನೇಮಕ

Public TV
2 Min Read

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಎರಡನೇ ಅತ್ಯುನ್ನತ ಹುದ್ದೆ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗರಾದ ದತ್ತಾತ್ರೇಯ ಹೊಸಬಾಳೆ ಅವರು ನೇಮಕವಾಗಿದ್ದಾರೆ.

ಮೋಹನ್ ಭಾಗವತ್ ಅವರು ಆರ್‌ಎಸ್‌ಎಸ್‌ ನ ಸರಸಂಘಚಾಲಕರಾಗಿದ್ದು, ಇವರ ನಂತರದ ಸ್ಥಾನಕ್ಕೆ ಶಿವಮೊಗ್ಗದ ದತ್ತಾತ್ರೇಯ ಹೊಸಬಾಳೆ ಅವರು ನೇಮಕವಾಗಿದ್ದಾರೆ. ಈ ಮೂಲಕ ಆರ್‌ಎಸ್‌ಎಸ್‌ ನಲ್ಲಿ 2ನೇ ಸ್ಥಾನದ ಹುದ್ದೆಯನ್ನು ಕನ್ನಡಿಗರೊಬ್ಬರು ಅಲಂಕರಿಸಿದಂತಾಗಿದೆ.

ಬೆಂಗಳೂರಿನ ಹೊರ ವಲಯದ ಚೆನ್ನೇನಹಳ್ಳಿ ಜನ ಸೇವಾ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ(ಎಬಿಪಿಎಸ್) ಅಧಿವೇಶನದ ವೇಳೆ ನಡೆದ ಚುನಾವಣೆಯಲ್ಲಿ ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರ್‌ಎಸ್‌ಎಸ್‌ ನಲ್ಲಿ ಸರಸಂಘಚಾಲಕ ಹಾಗೂ ಸರಕಾರ್ಯವಾಹ ಅತ್ಯುನ್ನತ ಹುದ್ದೆಯಾಗಿದ್ದು, ಈಗ ಮೋಹನ್ ಭಾಗವತ್ ಅವರು ಸರಸಂಘಚಾಲಕರಾಗಿದ್ದಾರೆ. ಇದರ ನಂತರದ ಹುದ್ದೆಯಾದ ಸರಕಾರ್ಯವಾಹ ಹುದ್ದೆಗೆ ಶನಿವಾರದ ಎಬಿಪಿಎಸ್ ನಲ್ಲಿ ನಡೆದ ಆಂತರಿಕ ಚುನಾವಣೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗಿದ್ದಾರೆ. 2009ರಿಂದ ಭೈಯಾಜಿ ಜೋಷಿಯವರು ಸರಕಾರ್ಯವಾಹರಾಗಿದ್ದರು.

ಈ ಹಿಂದೆ ಕರ್ನಾಟಕದಿಂದ ಹೋ.ವೇ.ಶೇಷಾದ್ರಿ ಅವರು ಸರಕಾರ್ಯವಾಹರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಇದೀಗ ಮತ್ತೆ ಇದೇ ಹುದ್ದೆ ಕನ್ನಡಿಗರಿಗೆ ಒಲಿದಿದ್ದು, ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗಿದ್ದಾರೆ.

ಹೊಸಬಾಳೆ ಕಿರುಪರಿಚಯ
ಶಿವಮೊಗ್ಗದ ಸೊರಬದವರಾದ ದತ್ತಾತ್ರೇಯ ಹೊಸಬಾಳೆ ಅವರು, 1975ರಲ್ಲಿ ಎಂಎ ಅರ್ಧಕ್ಕೆ ಬಿಟ್ಟು, ಲೋಕನಾಯಕ ಜೆಪಿ ಅವರ ನವನಿರ್ಮಾಣ ಆಂದೋಲನಕ್ಕೆ ಧುಮುಕಿ, ಹೋರಾಟದ ಬದುಕಿಗೆ ಕಾಲಿಟ್ಟರು. ಬಾಲ್ಯದಿಂದಲೂ ಆರ್‍ಎಸ್‍ಎಸ್ ಸ್ವಯಂ ಸೇವಕರಾಗಿದ್ದ ಹೊಸಬಾಳೆ ಅವರು ಪಿಯು ಓದುವಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾಗಿದ್ದರು. 1968-72ರಲ್ಲಿ ಸೊರಬ ಹಾಗೂ ಬೆಂಗಳೂರಿನಲ್ಲಿ ಆರ್‌ಎಸ್‌ಎಸ್‌ ಶಾಖೆಯ ಮುಖ್ಯ ಶಿಕ್ಷಕರಾಗಿದ್ದರು.

ಜೆಪಿ ಆಂದೋಲನಕ್ಕೆ ಧುಮುಕುವ ಮುನ್ನ 1975ರಲ್ಲಿ ಮಧ್ಯ ಪ್ರದೇಶದ ದುರ್ಗ್‍ನಲ್ಲಿ ಆರ್‌ಎಸ್‌ಎಸ್‌ ಓಟಿಸಿ(ಆಫೀಸರ್ಸ್ ಟ್ರೇನಿಂಗ್ ಕೋರ್ಸ್) ಶಿಬಿರ ಮಾಡಿದ್ದರು. ಅಲ್ಲದೆ ತುರ್ತು ಪರಿಸ್ಥಿತಿ ವಿರುದ್ಧ ರಾಜ್ಯದೆಲ್ಲೆಡೆ ಸಂಚರಿಸಿ ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸಿದರು. ಆದರೆ 1975ರ ಡಿಸೆಂಬರ್ 18ರಂದು ಮೀಸಾ ಕಾಯ್ದೆಯಡಿ ಬಂಧಿಸಲಾಗಿತ್ತು. ಬಳಿಕ ಹೊಸಬಾಳೆ ಅವರು ಸಂಘದ ಪೂರ್ಣಾವಧಿ ಪ್ರಚಾರಕರಾದರು.

1992 ರಿಂದ 2002ರ ವರೆಗೆ 10 ವರ್ಷಗಳ ಕಾಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2003ರಲ್ಲಿ ಅಖಿಲ ಭಾರತ ಸಹಬೌದ್ಧಿಕ್ ಪ್ರಮುಖ್ ಹೊಣೆಗಾರಿಕೆ ನೀಡಲಾಯಿತು. 2009ರ ವೆರೆಗೆ ಅವರು ಈ ಹುದ್ದೆಯಲ್ಲಿದ್ದರು. 2009ರಲ್ಲಿ ಸಂಘದ ಸಹ ಸರಕಾರ್ಯವಾಹ(ಜಂಟಿ ಪ್ರಧಾನ ಕಾರ್ಯದರ್ಶಿ)ರಾಗಿ ನಿಯೋಜಿಸಲಾಯಿತು. ದತ್ತಾತ್ರೇಯ ಹೊಸಬಾಳೆ ಅವರು ಕನ್ನಡ ಹಾಗೂ ಇಂಗ್ಲಿಷ್‍ನಲ್ಲಿ ಹಲವು ಲೇಖನಗಳನ್ನು ಬರೆದಿದ್ದಾರೆ. ಕನ್ನಡ ಮಾಸಿಕ ಅಸೀಮಾದ ಸ್ಥಾಪಕ ಸಂಪಾದಕರೂ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *