ಆರ್ಮಿ ಆತ್ಮ ನಿರ್ಭರ ಭಾರತ್ – ಕೇಂದ್ರ ರಕ್ಷಣಾ ಇಲಾಖೆಯಿಂದ ಮಹತ್ವದ ಘೋಷಣೆ

Public TV
2 Min Read

ನವದೆಹಲಿ: ರಕ್ಷಣಾ ಇಲಾಖೆಗೆ ಅವಶ್ಯವಿರುವ 101 ವಿವಿಧ ಉಪಕರಣಗಳನ್ನು ಭಾರತದಲ್ಲೇ ಉತ್ಪಾದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇಲಾಖೆಯಲ್ಲಿ ಸ್ವಾವಲಂಬಿ ಸಾಧಿಸುವ ನಿಟ್ಟಿನಲ್ಲಿ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಇಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆಯ 101 ಉಪಕರಣಗಳನ್ನು ಉತ್ಪಾದಿಸಲು ದೇಶಿಯ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಹಲವು ಹಂತದ ಮಾತುಕತೆ ಮುಗಿದಿದ್ದು, ಸುಮಾರು 1 ಲಕ್ಷ 40 ಸಾವಿರ ಕೋಟಿಯ ಉತ್ಪಾದನೆ ಇದಾಗಿದೆ ಎಂದು ಹೇಳಿದ್ದಾರೆ.

ಮದ್ದು, ಗುಂಡು, ಫಿರಂಗಿ, ಆರ್ಟಿಲರಿ ಗನ್, ರೆಡಾರ್, ಲಘು ಯುದ್ದ ವಿಮಾನ, ಹೆಲಿಕಾಪ್ಟರ್, ಸೋನಾರ್ ಸಿಸ್ಟಮ್, ಶಸ್ತ್ರಸಜ್ಜಿತ ವಾಹನ ಸೇರಿದಂತೆ 101 ವಿವಿಧ ಉಪಕರಣಗಳನ್ನು ದೇಶದಲ್ಲೇ ತಯಾರಿಸಲು ನಿರ್ಧರಿಸಿದೆ. ಇದರಿಂದ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ಸಿಗಲಿದೆ ಎಂದು ರಾಜನಾಥ್ ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

2020 ರಿಂದ 2024ರ ನಡುವೆ ಈ ಮಹತ್ವದ ಕಾರ್ಯ ನಡೆಯಲಿದೆ. ಸಂಪೂರ್ಣವಾಗಿ ರಕ್ಷಣಾ ಸಾಮಗ್ರಿ ದೇಶದಲ್ಲೇ ಉತ್ಪಾದನೆ ಆಗಲಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆ ಎಂಬ 5 ಆಧಾರ ಸ್ತಂಭಗಳ ಮೇಲೆ ಸ್ವಾವಲಂಬಿ ಭಾರತಕ್ಕಾಗಿ ಸ್ಪಷ್ಟ ಕರೆ ನೀಡಿದ್ದಾರೆ. ಹೀಗಾಗಿ ಸ್ವಾವಲಂಬಿ ಭಾರತಕ್ಕಾಗಿ `ಆರ್ಮಿ ಆತ್ಮ ನಿರ್ಭರ ಭಾರತ್’ ಹೆಸರಿನ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ರಕ್ಷಣಾ ಇಲಾಖೆ ಘೋಷಿಸಿದೆ ಎಂದು ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.

ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಪೂರೈಸಲು ಡಿಆರ್‌ಡಿಒ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಕಾರಾತ್ಮಕ ಪಟ್ಟಿಯಲ್ಲಿರುವ ವಸ್ತುಗಳನ್ನು ತಯಾರಿಸಲು ಇಂಡಸ್ಟ್ರಿಗಳಿಗೆ ಉತ್ತಮ ಅವಕಾಶವನ್ನು ನೀಡುತ್ತದೆ. ಸೇನಾ ಪಡೆಗಳು, ಸಾರ್ವಜನಿಕ ಮತ್ತು ಖಾಸಗಿಯ ಎಲ್ಲ ಷೇರುದಾರರ ಜತೆ ಹಲವು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ರಕ್ಷಣಾ ಇಲಾಖೆ ಸಾಮಗ್ರಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ 6 ರಿಂದ 7 ವರ್ಷ ದೇಶೀಯ ಉದ್ಯಮದ ಮೇಲೆ ಸುಮಾರು 4 ಲಕ್ಷ ಕೋಟಿ ರೂ.ಗಳ ಒಪ್ಪಂದಗಳನ್ನು ಮಾಡಲಾಗುವುದು ಎಂದು ಅಂದಾಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *