ಆರ್ಥಿಕ ಸಂಕಷ್ಟದಲ್ಲಿದ್ರೂ ಆಟಗಾರರ ವೇತನ ಕಡಿತವಿಲ್ಲ- ಬಿಸಿಸಿಐ

Public TV
2 Min Read

ಮುಂಬೈ: ಕೊರೊನಾ ವೈರಸ್‍ನಿಂದಾಗಿ ಎರಡು ತಿಂಗಳಿನಿಂದ ಯಾವುದೇ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಸೇರಿದಂತೆ ಅನೇಕ ಕ್ರಿಕೆಟ್ ಮಂಡಳಿಗಳು ಆಟಗಾರರ ವೇತನವನ್ನು ಕಡಿತಗೊಳಿಸಿವೆ. ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರ ವೇತನವನ್ನು ಕಡಿತಗೊಳಿಸದಿರಲು ನಿರ್ಧರಿಸಿದೆ.

ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು ಇತರ ಖರ್ಚುಗಳನ್ನು ಕಡಿತಗೊಳಿಸುವ ಮೂಲಕ ನಷ್ಟವನ್ನು ಸರಿದೂಗಿಸಲಾಗುವುದು. ಯಾವುದೇ ಕಾರಣಕ್ಕೂ ಆಟಗಾರರ ವೇತನದಲ್ಲಿ ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಆಟಗಾರರ ವೇತನವನ್ನು ಕಡಿತಗೊಳಿಸುವ ಬಗ್ಗೆ ನಾವು ಇನ್ನೂ ಯೋಚಿಸಿಲ್ಲ. ಹಣಕಾಸಿನ ಬಿಕ್ಕಟ್ಟನ್ನು ನಿವಾರಿಸಲು ನಮಗೆ ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ. ಆದರೆ ಈ ಬಾರಿಯ ಐಪಿಎಲ್ ರದ್ದಾದರೆ ಬಿಸಿಸಿಐ ದೊಡ್ಡ ನಷ್ಟವನ್ನು ಅನುಭವಿಸಬಹುದು. ಈ ರೀತಿಯ ಪರಿಸ್ಥಿತಿ ಸಂಭವಿಸಿದಾಗ ಅದರ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇವೆ. ಆದರೆ ಆಟಗಾರರ ವೇತನ ಕಡಿತಗೊಳಿಸುವುದು ಕೊನೆಯ ಮಾರ್ಗವಾಗಿದೆ” ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ.

ಕೊರೊನಾ ವೈರಸ್‍ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಐಪಿಎಲ್ ರದ್ದುಗೊಂಡರೆ ಮಂಡಳಿಗೆ ಸುಮಾರು 4 ಸಾವಿರ ಕೋಟಿ ರೂ.ಗಳ ಆದಾಯ ನಷ್ಟವಾಗಲಿದೆ ಎಂದು ಅರುಣ್ ಧುಮಾಲ್ ಇತ್ತೀಚೆಗೆ ಹೇಳಿದ್ದರು.

“ಇಲ್ಲಿಯವರೆಗೆ ಆಟಗಾರರ ವೇತನ ಕಡಿತದ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಆದರೆ ಸಿಬ್ಬಂದಿ ಮತ್ತು ಅಧಿಕಾರಿಗಳ ವೆಚ್ಚವನ್ನು ಕಡಿತಗೊಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಪ್ರಯಾಣ, ವಸತಿ ಅಥವಾ ಸಿಬ್ಬಂದಿ ಸೇರಿದಂತೆ ಎಲ್ಲೆಲ್ಲಿ ವೆಚ್ಚ ಕಡಿತಕ್ಕೆ ಅವಕಾಶವಿದೆ ಎಂಬುದನ್ನು ಗಮನಿಸಲಾಗುತ್ತಿದೆ” ಎಂದು ತಿಳಿಸಿದರು.

ಲಾಕ್‍ಡೌನ್ ನಂತರ ಆಟಗಾರರು ಅಭ್ಯಾಸಕ್ಕೆ ಮುಂದಾಗುವಂತೆ ಕೆಲಸ ಮಾಡುತ್ತಿದ್ದೇವೆ. ಪ್ರಸ್ತುತ ಲಾಕ್‍ಡೌನ್ ದೃಷ್ಟಿಯಿಂದ ಮನೆಯಲ್ಲಿರು ಆಟಗಾರರಿಗೆ ಕೋಚಿಂಗ್ ನೀಡಲಾಗುತ್ತಿದೆ. ಜೊತೆಗೆ ಸಹಾಯಕ ಸಿಬ್ಬಂದಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು.

ಕ್ರಿಕೆಟ್ ತಜ್ಞರ ಪ್ರಕಾರ, ಈ ವರ್ಷ ಭಾರತ-ಆಸ್ಟ್ರೇಲಿಯಾ ಸರಣಿಗಳು ಮಾತ್ರ ನಡೆಯುವ ಸಾಧ್ಯವೆಂದು ತೋರುತ್ತದೆ. ಅದು ನವೆಂಬರ್-ಡಿಸೆಂಬರ್‍ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ 4 ಟೆಸ್ಟ್ ಮತ್ತು 3 ಏಕದಿನ ಸರಣಿಗಳನ್ನು ಆಡಬೇಕಾಗಿದೆ. ಪಾಕಿಸ್ತಾನವು ಈ ವರ್ಷದ ಏಷ್ಯಾಕಪ್ ಅನ್ನು ಸೆಪ್ಟೆಂಬರ್ ನಲ್ಲಿ ದುಬೈನಲ್ಲಿ ನಡೆಸಲು ನಿರ್ಧರಿಸಿದೆ. ಇತ್ತ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಿದೆ. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಈ ಎರಡೂ ಟೂರ್ನಿಗಳನ್ನು ನಡೆಸಲು ಸಾಧ್ಯವಿಲ್ಲ.

Share This Article
Leave a Comment

Leave a Reply

Your email address will not be published. Required fields are marked *