ಆರ್ಚರಿ ವರ್ಲ್ಡ್ ಕಪ್‍ನಲ್ಲಿ ಭಾರತಕ್ಕೆ 4ನೇ ಚಿನ್ನದ ಪದಕ – ಒಂದೇ ದಿನ 3 ಚಿನ್ನ ಗೆದ್ದ ದೀಪಿಕಾ

Public TV
2 Min Read

ಪ್ಯಾರಿಸ್: ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಆರ್ಚರಿ (ಬಿಲ್ಲುಗಾರಿಕೆ) ವರ್ಲ್ಡ್ ಕಪ್ ನಲ್ಲಿ ಭಾರತ ಒಂದೇ ದಿನ ಮೂರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದುವರೆಗೂ ಭಾರತ ಒಟ್ಟು ನಾಲ್ಕು ಚಿನ್ನದ ಪದಕ ಗೆದ್ದುಕೊಂಡಿದೆ. ದೀಪಿಕಾ ಕುಮಾರಿ ಒಂದೇ ದಿನ ಮೂರು ಸ್ವರ್ಣ ಪದಕ ಗೆಲ್ಲುವ ಭಾರತದ ಪತಾಕೆ ಹಾರಿಸಿದ್ದಾರೆ.

ದೀಪಿಕಾ ಕುಮಾರಿ ಮೊದಲಿಗೆ ಪತಿ ಅತನು ದಾದ್ ಜೊತೆಗಿನ ಮಿಕ್ಸಡ್ ಡಬಲ್ ಇವೆಂಟ್ ನಲ್ಲಿ ಸರಳವಾಗಿ ಚಿನ್ನವನ್ನ ತಮ್ಮದಾಗಿಸಿಕೊಂಡು ದಂಪತಿ ಓಲಿಂಪಿಕ್ ಗೆ ಪ್ರವೇಶಕ್ಕೆ ಕ್ವಾಲಿಫೈ ಆದ್ರು. ಓಲಿಂಪಿಕ್ ನಲ್ಲಿ ಜೋಡಿಯ ಮೇಲೆ ಹೆಚ್ಚು ನಿರೀಕ್ಷೆ ಇದೆ. ತದನಂತರ ದೀಪಿಕಾ ನೇತೃತ್ವದಲ್ಲಿ ಭಾರತದ ಮಹಿಳಾ ರಿಕವರ್ ತಂಡ ಚಿನ್ನ ಗೆದ್ದು ಸಂಭ್ರಮಿಸಿತು. ಟೀಂ ಇವೆಂಟ್ ಮೆಕ್ಸಿಕೋ ವಿರುದ್ಧ ಭಾರತ 5-1ರ ಅಂತರದಲ್ಲಿ ಸರಳವಾಗಿ ಗೆಲುವನ್ನ ತನ್ನದಾಗಿಸಿಕೊಂಡಿತು. ಭಾರತದಲ್ಲಿ ತಂಡದಲ್ಲಿ ದೀಪಿಕಾ ಜೊತೆ ಅಂಕಿತಾ ಭಗತ್ ಮತ್ತು ಕೊಮೊಲಿಕಾ ಬಾರಿ ಸಹ ಇದ್ದರು.

ಈ ದಿನದ ಅಂತ್ಯಕ್ಕೆ ವೈಯಕ್ತಿಕ (ಸಿಂಗಲ್) ವಿಭಾಗದಲ್ಲಿ ದೀಪಿಕಾ ಕುಮಾರಿ ಭಾರತಕ್ಕೆ ಚಿನ್ನ ತಂದುಕೊಟ್ಟರು. ರಷ್ಯಾದ ಎಲಿನಾ ಓಸಿಪೊವಾ ಅವರನ್ನ 6-0 ಅಂತರದಲ್ಲಿ ಗೆದ್ದು ಬೀಗಿದರು. ಒಂದೇ ದಿನ ಮೂರು ಸ್ವರ್ಣ ಪದಕ ಗೆದ್ದ ದೀಪಿಕಾ ಕುಮಾರಿ ಮೇಲೆ ಓಲಿಂಪಿಕ್ಸ್ ನಲ್ಲಿ ಭರವಸೆ ಹೆಚ್ಚಾಗಿದೆ. ಜಪಾನ್ ದೇಶದ ರಾಜಧಾನಿ ಟೋಕಿಯೋದಲ್ಲಿ ಜುಲೈ 23ರಿಂದ ಆಗಸ್ಟ್ 8ರವರೆಗೆ ಓಲಿಂಪಿಕ್ ಪಂದ್ಯಗಳು ನಡೆಯಲಿವೆ.

ದಂಪತಿಗೆ ಮೊದಲ ಸ್ವರ್ಣ ಪದಕ:
ಅತನು ದಾಸ್ ಮತ್ತು ದೀಪಿಕಾ ಕುಮಾರಿ ಮೊದಲ ಬಾರಿಗೆ ಜೋಡಿಯಾಗಿ ಈ ಇವೆಂಟ್ ನಲ್ಲಿ ಚಿನ್ನ ಗೆದ್ದಿದ್ದಾರೆ. ಮಿಕ್ಸಡ್ ಇವೆಂಟ್ ನಲ್ಲಿ ನೆದರಲ್ಯಾಂಡ್ ನ ಜೆಫ್ ವಾನ್ ಡೆನ್ ಬರ್ಗ್ ಮತ್ತು ಗೆಬ್ರಿಯೆಲಾ ಶೊಲ್ಸರ್ ಅವರನ್ನ 5-3 ಅಂತರದಲ್ಲಿ ಗೆದ್ದು ಪಂದ್ಯವನ್ನ ತಮ್ಮ ಹೆಸರಿನಲ್ಲಿ ಬರೆದುಕೊಂಡರು. ಪಂದ್ಯದ ಆರಂಭದಲ್ಲಿ ಭಾರತದ ಜೋಡಿ 2-0 ಅಂತರದಲ್ಲಿ ಹಿಂದಿತ್ತು.

ಜೂನ್ 30ಕ್ಕೆ ಮದುವೆ ವಾರ್ಷಿಕೋತ್ಸವ:
ಇದೇ ಜೂನ್ 30 ರಂದು ಅತುನ್ ಮತ್ತು ದೀಪಿಕಾ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದಾರೆ. ಜೊತೆಯಾಗಿ ಚಿನ್ನ ಗೆಲ್ಲುವ ಮೂಲಕ ಒಬ್ಬರಿಗೊಬ್ಬರು ಮರೆಯಲಾಗದ ಕೊಡುಗೆ ನೀಡಿದ್ದಾರೆ.

ಚಿನ್ನ ಗೆದ್ದ ಅಭಿಷೇಕ್:
ಇದೇ ವರ್ಲ್ಡ್ ಕಪ್ ನಲ್ಲಿ ಅಭಿಷೇಕ್ ವರ್ಮಾ ಶನಿವಾರ ಸ್ವರ್ಣದ ಹಕ್ಕುದಾರರಾಗಿದ್ದರು. ಕಾಂಪೌಂಡ್ ರೌಂಡ್ ನಲ್ಲಿ ವರ್ಲ್ಡ್ ನಂಬರ್ 5, ಅಮೆರಿಕದ ಕ್ರಿಸ್ ಸ್ಕಾಫ್‍ಗೆ ಸೋಲಿನ ರುಚಿ ತೋರಿಸಿದ್ದರು. 32 ವರ್ಷದ ಅಭಿಷೇಕ್ ವರ್ಮಾ, ವರ್ಲ್ಡ್ ಕಪ್ ನಲ್ಲಿ ಒಪಡೆದ ಎರಡನೇ ಚಿನ್ನ ಇದಾಗಿದೆ. ಇದಕ್ಕೂ ಮೊದಲು 2015ರಲ್ಲಿ ವರ್ಲ್ಡ್ ಕಪ್ ಸ್ಟೇಜ್-3ರ ಕಾಂಪೌಂಡ್ ರೌಂಡ್ ನಲ್ಲಿ ಚಿನ್ನಕ್ಕೆ ಗುರಿ ಇಟ್ಟು ಗೆದ್ದುಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *