ಆರೆಂಜ್ ಜೆರ್ಸಿಯಲ್ಲಿ ರೈಸರ್ಸ್‍ಗೆ ಚೀಯರ್ ಮಾಡುತ್ತಿರುವ ಚೆಲುವೆ – ಯಾರೂ ಈ ಕಾವ್ಯ?

Public TV
2 Min Read

ಅಬುಧಾಬಿ: ಐಪಿಎಲ್ ಕ್ರಿಕೆಟ್ ಹಬ್ಬ ದಿನೇ ದಿನೇ ರಂಗೇರುತ್ತಿದೆ. ಈಗ ಸನ್ ರೈಸರ್ಸ್ ಹೈದರಾಬಾದ್ ತಂಡ ಫ್ಯಾನ್ ಸ್ಟ್ಯಾಂಡಿನಲ್ಲಿ ಓರ್ವ ಚೆಲುವೆ ಕಾಣಿಸಿಕೊಂಡಿದ್ದು, ಈಕೆ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಹೌದು ವಾರ್ನರ್ ಪಡೆಗೆ ಪ್ರತಿ ಪಂದ್ಯದಲ್ಲೂ ಚೀಯರ್ ಮಾಡಲು ಆರೆಂಜ್ ಜೆರ್ಸಿ, ಕಣ್ಣಿಗೆ ಕಪ್ಪು ಕನ್ನಡಕ ತೊಟ್ಟ ಯುವತಿಯೊಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅವರು ಯಾರು ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆ ಈಗ ಉತ್ತರ ಸಿಕ್ಕಿದ್ದು, ಅವರು ಹೈದರಾಬಾದ್ ತಂಡ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ 28 ವರ್ಷದ ಕಾವ್ಯ ಮಾರನ್ ಎಂದು ತಿಳಿದು ಬಂದಿದೆ.

ಕೊರೊನಾ ಕಾರಣದಿಂದ ಐಪಿಎಲ್ ಆರು ತಿಂಗಳು ತಡವಾಗಿ ಯುಎಇಯಲ್ಲಿ ಆರಂಭವಾಗಿದೆ. ಈ ಬಾರಿ ಯಾವುದೇ ಪ್ರೇಕ್ಷಕನಿಲ್ಲದೇ ಖಾಲಿ ಮೈದಾನದಲ್ಲಿ ಐಪಿಎಲ್ ಆರಂಭವಾಗಿದೆ. ತಂಡದ ಆಟಗಾರರು, ಸಿಬ್ಬಂದಿಗಳು ಬಿಟ್ಟರೆ ಕೇವಲ ತಂಡದ ಮಾಲೀಕರು ಮತ್ತು ಅವರ ಕುಟುಂಬದವರು ಮಾತ್ರ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂತೆಯೇ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಮಾಲೀಕ ಕಲಾನಿತಿ ಮಾರನ್ ಅವರ ಪುತ್ರಿ ಕಾವ್ಯ ಮಾರನ್ ಅವರು ಮೈದಾನದಲ್ಲಿ ಮಿಂಚುತ್ತಿದ್ದಾರೆ.

ಕಾವ್ಯ ಮಾರನ್ ಅವರ ತಂದೆ ಕಲಾನಿಧಿ ಮಾರನ್ ಅವರು ಸನ್ ಟಿವಿ ನೆಟ್‍ವರ್ಕ್ ನ ಮಾಲೀಕರಾಗಿದ್ದು, 31 ಟಿವಿ ಚಾನೆಲ್ ಮತ್ತು 45 ಎಫ್‍ಎಂ ಚಾನೆಲ್ ಹೊಂದಿದ್ದಾರೆ. ಕಾವ್ಯ ಮಾರನ್ ಚೆನ್ನೈನ ಸ್ಟೆಲಿಯಾ ಮಾರಿಸ್ ಕಾಲೇಜಿನಲ್ಲಿ ಬಿಕಾಂ ಓದಿದ್ದಾರೆ. ನಂತರ ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಎಂಬಿಎ ಓದಿ ಮುಗಿಸಿದ್ದಾರೆ. ಓದಿನ ನಂತರ ತಮ್ಮ ಸನ್ ಟಿವಿಯಲ್ಲೇ ಒಂದು ವರ್ಷ ಕೆಲಸ ಮಾಡಿ, ಕಳೆದ ವರ್ಷದಿಂದ ಸನ್ ಟಿವಿ ನೆಟ್‍ವರ್ಕ್ ಬೋರ್ಡಿನ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ 2019ರಲ್ಲಿ ನಡೆದ ಐಪಿಎಲ್ ಬೀಡಿಂಗ್ ಕಾರ್ಯಕ್ರಮದಲ್ಲಿ ಕೂಡ ಕಾವ್ಯ ಕಾಣಿಸಿಕೊಂಡಿದ್ದರು.

ಓದಿನ ನಂತರ ಅಪ್ಪನ ಉದ್ಯಮದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿರುವ ಕಾವ್ಯ ಮಾರನ್ ಅವರು, ಸನ್ ಟಿವಿ ಗ್ರೂಪಿನ ಡಿಜಿಟೆಲ್ ಮಾರ್ಕೆಟಿಂಗ್‍ನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸದ್ಯ ಕಾವ್ಯ ಸನ್ ಟಿವಿ ಗ್ರೂಪಿನ ಸನ್ ಎನ್‍ಎಕ್ಸ್‍ಟಿ ಎಂಬ ಒಟಿಟಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇದರ ಜೊತೆಗೆ ತಮ್ಮ ಮಾಲೀಕತ್ವದ ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಹುರಿದುಂಬಿಸಲು ಪ್ರತಿ ಪಂದ್ಯಕ್ಕೂ ಮೈದಾನಕ್ಕೆ ಬಂದು ಚೀಯರ್ ಮಾಡುತ್ತಿದ್ದಾರೆ.

ಹಲವಾರು ಉದ್ಯಮಿಗಳು ಮತ್ತು ಚಿತ್ರರಂಗದವರು ಐಪಿಎಲ್ ತಂಡವನ್ನು ಖರೀದಿ ಮಾಡಿದ್ದು, ತಮ್ಮ ತಂಡವನ್ನು ಪ್ರೋತ್ಸಾಹಿಸಲು ಮೈದಾನಕ್ಕೆ ಬರುತ್ತಿದ್ದಾರೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಾಲೀಕ ಶಾರುಖ್ ಖಾನ್ ಮತ್ತು ಮಗಳು ಸುಹಾನ ಖಾನ್ ಮತ್ತು ಕುಟುಂಬದವರು ಬಂದಿದ್ದರು. ಜೊತೆಗೆ ತಮ್ಮ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಚೀಯರ್ ಮಾಡಲು ನಟಿ ಪ್ರೀತಿ ಜಿಂಟಾ ಬರುತ್ತಾರೆ. ಮುಂಬೈ ಇಂಡಿಯನ್ಸ್ ತಂಡ ಮಾಲೀಕ ಮುಖೇಶ್ ಅಂಬಾನಿಯವರ ಪುತ್ರ ಆಕಾಶ್ ಅಂಬಾನಿ ಕೂಡ ಐಪಿಎಲ್ ಪಂದ್ಯದ ವೇಲೆ ಕಾಣಿಸಿಕೊಳ್ಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *